ಹೈದರಾಬಾದ್ (ತೆಲಂಗಾಣ): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿನ ಮುಚ್ಚಿಂತಲ್ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 54 ಅಡಿ ಎತ್ತರದ ರಾಮಾನುಜಾಚಾರ್ಯರ ಸಮತಾಮೂರ್ತಿ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಶ್ರೀ ಜಗದ್ಗುರು ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 216 ಅಡಿ ಎತ್ತರದ ರಾಮಾನುಜಾಚಾರ್ಯರ ಸಮಾನತಾ ಪ್ರತಿಮೆ ಅನಾವರಣಗೊಳಿಸಿದ್ದರು. ಇದೀಗ ರಾಮ್‌ನಾಥ್ ಕೋವಿಂದ್ ಅವರು 120 ಕೆಜಿ ಚಿನ್ನದಿಂದ ಕೂಡಿದ ರಾಮಾನುಜಾಚಾರ್ಯರ ಸ್ವರ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಸ್ವರ್ಣ ಪ್ರತಿಮೆ ಲೋಕಾರ್ಪಣೆಗೂ ಮುನ್ನ ಕೋವಿಂದ್ ಅವರು ರಾಮಾನುಜಾಚಾರ್ಯರ ಸಮಾನತಾ ಪ್ರತಿಮೆ ದರ್ಶನ ಪಡೆದರು. ಇದೀಗ ಇಲ್ಲಿ ನಿರ್ಮಿಸಲಾಗಿರುವ 108 ವೈಷ್ಣವ ದೇವಾಲಯಗಳನ್ನು ವೀಕ್ಷಿಸುತ್ತಿದ್ದಾರೆ. ರಾಷ್ಟ್ರಪತಿ ಜೊತೆಗೆ ತೆಲಂಗಾಣ ರಾಜ್ಯಪಾಲ ತಮಿಳಿಸಾಯಿ ಸೌಂದರ್ ರಾಜನ್ ಮತ್ತು ಸಚಿವ ತಲಸಾನಿ ಶ್ರೀನಿವಾಸ್ ಇದ್ದಾರೆ.
ಇದನ್ನೂ ಓದಿ: VIDEO: ಸಮಾನತೆ ಪ್ರತಿಮೆ ಲೋಕಾರ್ಪಣೆ: ಪೂರ್ಣಾಹುತಿಯಲ್ಲಿ ಭಾಗಿಯಾದ ನಮೋ!
ವಿಶೇಷ ವಿಮಾನದಲ್ಲಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ತಮಿಳಿಸಾಯಿ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸ್ವಾಗತಿಸಿದರು. ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ರಾಷ್ಟ್ರಪತಿ ಹಾಗೂ ಅವರ ಪತ್ನಿ ಮುಚ್ಚಿಂತಲ್‌ಗೆ ತೆರಳಿದರು.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಮುಚ್ಚಿಂತಾಲ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಂಶಾಬಾದ್ ವಿಮಾನ ನಿಲ್ದಾಣದಿಂದ ಮುಚ್ಚಿಂತಲ್‌ವರೆಗೆ ಸುಮಾರು 7000 ಪೊಲೀಸ್ ಸಿಬ್ಬಂದಿಯೊಂದಿಗೆ ಭಾರೀ ಭದ್ರತೆ ಒದಗಿಸಲಾಗಿದೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿತ್ತು.