ನಾಗಪುರ: ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಆ ದಿನವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರಸಿದ್ಧ ಶೆಫ್ (ಬಾಣಸಿಗ) ವಿಷ್ಣು ಮನೋಹರ್ 2000 ಕಿಲೋಗ್ರಾಮ್ ಗರಿಗರಿಯಾದ ಚಿವಡಾ (ಅವಲಕ್ಕಿಯ ಖಾರದ ಸ್ನ್ಯಾಕ್ಸ್) ತಯಾರಿಸಲು ಸಜ್ಜಾಗಿದ್ದಾರೆ. ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿವಡಾ ತಯಾರಿಸುವ ಪ್ರಥಮ ಪ್ರಯತ್ನ ಇದಾಗಿರುವುದರಿಂದ ಇಡೀ ನಾಗಪುರ ಜನತೆಯ ಗಮನ ಸೆಳೆದಿದೆ. 2 ಸಾವಿರ ಕೆಜಿ ಚಿವಡಾ ತಯಾರಿಸುವ ಈ ಪ್ರಯತ್ನ ವಿಷ್ಣು ಮನೋಹರ್ ಅವರ 14ನೇ ವಿಶ್ವದಾಖಲೆಯಾಗಲಿದೆ.
ಕಾಂಚನ್ ಗಡ್ಕರಿ ಮತ್ತು ಅಮೃತಾ ಫಡ್ನವಿಸ್ ಈ ಚಿವಡಾವನ್ನು ಉಚಿತವಾಗಿ ವಿತರಿಸಲಿದ್ದಾರೆ. ಈ ಹಿಂದೆ ವಿಷ್ಣು ಮನೋಹರ್ ಗಣೇಶೋತ್ಸವ ಸಂದರ್ಭದಲ್ಲಿ 2500 ಕೆಜಿ ಒಣ ಬೇಳೆಕಾಳುಗಳಿಂದ ತಯಾರಿಸಲಾದ ಪ್ರಸಾದ ಹಂಚಿದ್ದರು.
ನಾಗಪುರ ನಗರದ ರಾಮದಾಸ್ಪೇಟ್ನ ವಿಷ್ಣುಜಿ ಕಿ ರಸೋಯಿಯಲ್ಲಿ 6000 ಕೆಜಿ ತೂಕದ ಬೃಹತ್ ಕಡಾಯಿಯಲ್ಲಿ ಚಿವಡಾ ತಯಾರಿಸಲಾಗುತ್ತದೆ. ದೀಪಾವಳಿ ಹಾಗೂ ವಿಶ್ವ ಆಹಾರ ದಿನದಂದು ಚಿವಡಾ ತಯಾರಿಸಲು ಶೆಫ್ ವಿಷ್ಣು ಮನೋಹರ್ ನಿರ್ಧರಿಸಿದ್ದಾರೆ. ಕುರುಕುರೇಯಾದ ಚಿವಡಾ ತಯಾರಿಸಲು ಮಧ್ಯಪ್ರದೇಶದ ಉಜ್ಜಯಿನಿಯಿಂದ 600 ಕೆಜಿ ಅವಲಕ್ಕಿ ತರಲಾಗುವುದು. ಇದಲ್ಲದೇ ಬಾದಾಮಿ ಹಾಗೂ ಗೋಡಂಬಿಗಳನ್ನು ಸಹ ಚಿವಡಾದಲ್ಲಿ ಸೇರಿಸಲಾಗುವುದು.
ಚಿವಡಾಗೆ ಬೇಕಾಗುವ ಸಾಮಗ್ರಿಗಳು: 2000 ಕೆಜಿ ಕುರುಕುರೆ ಚಿವಡಾ ತಯಾರಿಸಲು 350 ಕೆಜಿ ಕಡಲೆ ಎಣ್ಣೆ, ಶೇಂಗಾ 100 ಕೆಜಿ, ಗೋಡಂಬಿ, ಒಣದ್ರಾಕ್ಷಿ 100 ಕೆಜಿ, ಪುಟಾಣಿ ಮತ್ತು ತೆಂಗಿನಕಾಯಿ ತಲಾ 50 ಕೆಜಿ, ಇಂಗು ಮತ್ತು ಜೀರಿಗೆ ಪುಡಿ ತಲಾ 15 ಕೆಜಿ, ಮೆಣಸಿನ ಪುಡಿ 40 ಕೆಜಿ, ಕರಿಬೇವು ಮತ್ತು ಸಾಂಬಾರ್ ತಲಾ 100 ಕೆಜಿ, ಒಣಗಿದ 50 ಕೆಜಿ ಈರುಳ್ಳಿ, 40 ಕೆಜಿ ಕೊತ್ತಂಬರಿ ಪುಡಿ ಬೇಕಾಗುತ್ತದೆ.
ವಿಶ್ವ ದಾಖಲೆಯ ವಿಷ್ಣು ಮನೋಹರ್: ಖ್ಯಾತ ಬಾಣಸಿಗ ವಿಷ್ಣು ಮನೋಹರ್ ಯಾವಾಗಲೂ ಹೊಸದನ್ನೇನಾದರೂ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಗಣೇಶೋತ್ಸವದಲ್ಲಿ 2.5 ಸಾವಿರ ಕೆಜಿ ಒಣ ಬೇಳೆಕಾಳುಗಳನ್ನು ಪ್ರಸಾದ ನೀಡಿದ್ದರು. ಇದಕ್ಕೂ ಮುನ್ನ 5 ಅಡಿ ಉದ್ದ, 5 ಅಡಿ ಅಗಲದ ಉದ್ದ ಪರೋಟ ಸಿದ್ಧಪಡಿಸಿದ್ದರು. 7000 ಕೆಜಿ ಮಹಾ ಮಿಸಳ್ ತಯಾರಿಸಿ ಮನೋಹರ್ ವಿಶ್ವ ದಾಖಲೆ ಬರೆದಿದ್ದರು. ಚಿವಡಾ ತಯಾರಿಕೆ ಮನೋಹರ್ ಅವರ 14ನೇ ವಿಶ್ವ ದಾಖಲೆಯಾಗಲಿದೆ. ಸತತ 53 ಗಂಟೆಗಳ ಕಾಲ ಅಡುಗೆ ಮಾಡುವ ವಿಶ್ವ ದಾಖಲೆಯನ್ನು ಹೊಂದಿರುವ ವಿಶ್ವದ ಏಕೈಕ ಬಾಣಸಿಗ ಇವರಾಗಿದ್ದಾರೆ.
ಇದನ್ನೂ ಓದಿ: World Food Day: ಹಸಿವನ್ನು ಎದುರಿಸುವೆಡೆ ಹೆಜ್ಜೆ ಇಡಿ..