ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಇತ್ತೀಚಿನ ಉಪಚುನಾವಣೆ ಫಲಿತಾಂಶಗಳ ಕುರಿತು ಚರ್ಚೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಪಕ್ಷದ ಪ್ರಮುಖರು ಇಂದು ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಭಾಗವಹಿಸಲು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್ ಅವರು ಸಭೆಗೆ ಆಗಮಿಸಿದ್ದಾರೆ. ಸಭೆಯಲ್ಲಿ ಇತ್ತೀಚಿನ ಉಪಚುನಾವಣೆ ಫಲಿತಾಂಶಗಳ ಕುರಿತು ಚರ್ಚಿಸಲಾಗುವುದು ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ. ಸಭೆಯ ಉದ್ಘಾಟನಾ ಭಾಷಣವನ್ನು ಜೆ ಪಿ ನಡ್ಡಾ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಭಾಷಣದೊಂದಿಗೆ ಸಮಾರೋಪಗೊಳ್ಳಲಿದೆ.
ಕೊರೊನಾ ಸಾಂಕ್ರಾಮಿಕದಲ್ಲಿ ಸಾವಿಗೀಡಾಗಿರುವ ಲಕ್ಷಾಂತರ ಜನರಿಗೆ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸುವುದಲ್ಲದೆ, ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತ ವಿಶೇಷ ಚಿಂತನ– ಮಂಥನವೂ ಸಭೆಯಲ್ಲಿ ನಡೆಯಲಿದೆ. ಕೋವಿಡ್ ಸಂದರ್ಭ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ದೇಶಾದ್ಯಂತ ಸೇವೆ ಸಲ್ಲಿಸಿದ್ದು, 100 ಕೋಟಿ ಡೋಸ್ ಕೊರೊನಾ ಲಸಿಕೆಯ ಗುರಿ ಸಾಧಿಸಿರುವುದು ಸರ್ಕಾರದ ಸಾಧನೆ ಎಂದು ಸಭೆಗೆ ಮುನ್ನ ಪಕ್ಷ ಬಿಡುಗಡೆ ಮಾಡಿರುವ ಹೇಳಿಕೆಯಾಗಿದೆ.
ಸಭೆಯಲ್ಲಿ ಪಕ್ಷದ 124 ಸದಸ್ಯರು ಭಾಗವಹಿಸಿದ್ದು, ಕೆಲವು ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಹಣಕಾಸು ಸಚಿವರು ನಿರ್ಮಲಾ ಸೀತಾರಾಮನ್ ಸಹ ಉಪಸ್ಥಿತರಿದ್ದಾರೆ. ಕೋವಿಡ್ 19 ಇವುದರಿಂದ, ಕೆಲವು ನಾಯಕರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆದಿಲ್ಲ. ಅವರು ಆಯಾ ರಾಜ್ಯಗಳ ಪಕ್ಷದ ಕಚೇರಿಯಿಂದಲೇ ವರ್ಚುವಲ್ ಮೂಲಕ ಭಾಗಿಯಾಗಿದ್ದಾರೆ.