ಪ್ರಯಾಗರಾಜ್( ಉತ್ತರಪ್ರದೇಶ): ಜಿಲ್ಲೆಯ ಕರ್ಚನಾ ಪ್ರದೇಶದ ದೀಹಾ ಗ್ರಾಮದಲ್ಲಿ ತೀವ್ರ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. 18ರ ಹರೆಯದ ಮಗಳ ಶವವನ್ನು ಕುಟುಂಬಸ್ಥರು ಕೇವಲ ತಂತ್ರ - ಮಂತ್ರದ ಮೂಲಕ ಜೀವ ತುಂಬುತ್ತೇವೆ ಎಂಬ ನಂಬಿಕೆಯಲ್ಲಿ 3 ದಿನಗಳ ಕಾಲ ಮನೆಗೆ ಬೀಗ ಹಾಕಿದ್ದ ಘಟನೆ ನಡೆದಿದೆ.
ಮನೆಯವರ ಈ ಹುಚ್ಚುತನ ಗ್ರಾಮದ ಜನರಿಗೆ ಗೊತ್ತಾಗಿದೆ. ಹೀಗಾಗಿ ಅವರೆಲ್ಲ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆರೆ ಹೊರೆಯವರ ದೂರಿನ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಭಯಾನಕ ದೃಶ್ಯವನ್ನು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಅಷ್ಟೇ ಅಲ್ಲ ಮನೆ ತಪಾಸಣೆ ಮಾಡಿ ಅಲ್ಲಿದ್ದ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಕರ ವಿಚಾರಣೆ ನಡೆಸುತ್ತಿದ್ದಾರೆ.
3 ದಿನಗಳ ಹಿಂದೆ ನಿಧನರಾಗಿದ್ದ ಯುವತಿ: ಭಯರಾಜ್ ಯಾದವ್ ಎಂಬುವವರು ತಮ್ಮ ಕುಟುಂಬದೊಂದಿಗೆ ಕರ್ಚನಾ ಪೊಲೀಸ್ ಠಾಣೆ ವ್ಯಾಪ್ತಿಯ ದಿಹಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅಭಯರಾಜ್ ಅವರ ಪುತ್ರಿ 18 ವರ್ಷದ ದೀಪಿಕಾ 3 ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆದರೆ, ಕುಟುಂಬಸ್ಥರು ಮೃತ ದೀಪಿಕಾಳ ಅಂತ್ಯ ಸಂಸ್ಕಾರ ನಡೆಸದೇ ಮನೆಗೆ ಬೀಗ ಹಾಕಿ ಹಾಗೆ ಕುಳಿತುಕೊಂಡಿದ್ದಾರೆ. ಮಗಳ ಅಂತ್ಯ ಸಂಸ್ಕಾರ ಮಾಡದೇ ಹಾಗೇ ಮನೆಯಲ್ಲೇ ಹೆಣ ಇಟ್ಟುಕೊಂಡಿರುವ ವಿಚಾರ ಗ್ರಾಮಸ್ಥರಿಗೆ ಗೊತ್ತಾಗಿದೆ. ಮನೆಯೊಳಗೆ ತಂತ್ರ - ಮಂತ್ರದ ಮೂಲಕ ಮಗಳನ್ನು ಬದುಕಿಸಲು ಮನೆಯವರು ಪ್ರಯತ್ನಿಸುತ್ತಿದ್ದಾರೆ ಎಂಬ ವಿಷಯವೂ ಬಯಲಾಗಿದೆ.
ಪೊಲೀಸರಿಗೆ ದೂರು ನೀಡಿದ್ದ ಗ್ರಾಮಸ್ಥರು: ಮನೆಯವರ ಮಂತ್ರ- ತಂತ್ರದ ವಿಚಾರ ಗ್ರಾಮಸ್ಥರಿಗೆ ಗೊತ್ತಾಗುತ್ತಿದ್ದಂತೆ ಕರ್ಚನಾ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಮದವರ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಲ್ಲಿ ನಡೆದ ಈ ದೃಶ್ಯ ಕಂಡು ಬಂದಿದೆ. ಅಲ್ಲಿ ಕುಟುಂಬದವರು ಮೃತ ಬಾಲಕಿಯನ್ನು ನೆಲದ ಮೇಲೆ ಮಲಗಿಸಿ ಏನೇನೋ ಪೂಜೆ ಪುನಸ್ಕಾರ ಮಾಡಿರುವುದು ಗೊತ್ತಾಗಿದೆ.
ಇನ್ನೊಂದೆಡೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಗೊತ್ತಾಗುತ್ತಿದ್ದಂತೆ ಮೃತ ಯುವತಿಯ ಕುಟುಂಬಸ್ಥರು ಪ್ರತಿಭಟನೆ ಸಹ ನಡೆಸಿದರು. ಶವ ಮುಟ್ಟಲು ಸಹ ಬಿಟ್ಟಿಲ್ಲ ಎನ್ನಲಾಗಿದೆ. ಆದರೆ, ಪೊಲೀಸರು ಶವವನ್ನು ಮನೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುಟುಂಬದವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ವಿಚಾರವನ್ನು ಪೊಲೀಸರು ಇದೇ ವೇಳೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಕುಟುಂಬಸ್ಥರನ್ನು ವಶಕ್ಕೆ ಪಡೆದು, ಅವರ ಮಾನಸಿಕ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಬಕೆಟ್ನ ನೀರಿನಲ್ಲಿ ಪತ್ನಿಯ ತಲೆ ಮುಳುಗಿಸಿ ಕೊಲೆ : ತಾನೂ ರೈಲಿಗೆ ತಲೆ ಕೊಟ್ಟ ಪತಿ!