ಪ್ರತಾಪ್ಗಢ( ಉತ್ತರಪ್ರದೇಶ): ಇಡೀ ಜಗತ್ತಿನಾದ್ಯಂತ ಕೋವಿಡ್ ತಲ್ಲಣವನ್ನೇ ಸೃಷ್ಟಿಸಿದೆ. ಜನತೆ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ಆಸ್ಪತ್ರೆಗಳ ಮುಂದೆ ನಿಂತಿರುವಾಗ, ಜಿಲ್ಲೆಯ ಜುಹಿ ಶುಕ್ಲಾಪುರ ಗ್ರಾಮಸ್ಥರು ಕೊರೊನಾ ಮಾತೆ ನಿರ್ಮಿಸಿದ್ದಾರೆ.
ಮಾಸ್ಕ್ ಧರಿಸಿರುವ ಕೊರೊನಾ ಮಾತೆ ವಿಗ್ರಹಕ್ಕೆ ಗ್ರಾಮಸ್ಥರು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನೂರಾರು ಜನರು ಒಂದೆಡೆ ಸೇರಿ ನಿಯಮ ಉಲ್ಲಂಘಿಸಿ ಕೊರೊನಾ ಮಾತೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಕೊರೊನಾ ಹರಡುವುದಿಲ್ಲ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ಗ್ರಾಮದಲ್ಲಿ ವೈರಸ್ಗೆ ಮೂರು ಬಲಿ
ಕೋವಿಡ್ನಿಂದಾಗಿ ಗ್ರಾಮದಲ್ಲಿ ಈವರೆಗೆ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ಭೀತಿಗೊಂಡ ಗ್ರಾಮಸ್ಥರು, ದೇಣಿಗೆ ಸಂಗ್ರಹಿಸಿ ಜೂನ್ 7 ರಂದು ಕೊರೊನಾ ಮಾತೆ ದೇಗುಲ ನಿರ್ಮಿಸಿದರು. ಬೇವಿನ ಮರದ ಪಕ್ಕ ಕೊರೊನಾ ಮಾತೆಯನ್ನು ಪ್ರತಿಷ್ಠಾಪಿಸಿರುವ ಜನ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ.
ಅಕ್ಕಪಕ್ಕದ ಗ್ರಾಮಸ್ಥರಿಂದಲೂ ಪೂಜೆ
ಕೋವಿಡ್ನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಅಕ್ಕಪಕ್ಕದ ಗ್ರಾಮಸ್ಥರು ಸಹ ಕೊರೊನಾ ಮಾತೆಯ ಮೊರೆ ಹೋಗಿದ್ದಾರೆ. ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರಸಾದ ಅರ್ಪಿಸುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.
ಕ್ರಮ ಕೈಗೊಳ್ಳದ ಅಧಿಕಾರಿಗಳು
ಕೆಲ ಗ್ರಾಮಸ್ಥರು ಇದನ್ನು ಮೂಢನಂಬಿಕೆ ಎಂದು ಹೇಳುತ್ತಿದ್ದರೂ, ದೇವಸ್ಥಾನದ ನಿರ್ಮಾಣಕಾರರು ಅದನ್ನು ಒಪ್ಪುತ್ತಿಲ್ಲ. ದೇವಿಗೆ ಮುಖವಾಡ ಧರಿಸಿದ್ದು, ಕೈ ತೊಳೆಯುವಂತೆ ವಿಗ್ರಹವನ್ನು ನಿರ್ಮಿಸಿದ್ದೇವೆ. ಇದರಿಂದಾಗಿ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಈವರೆಗೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.