ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸಲಹೆಗಾರರಾಗಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಕ್ರಿಯ ಸಾರ್ವಜನಿಕ ಜೀವನದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
"ಸಕ್ರಿಯ ಸಾರ್ವಜನಿಕ ಜೀವನದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಲು ನಾನು ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ನಿಮ್ಮ ಪ್ರಧಾನ ಸಲಹೆಗಾರ ಜವಾಬ್ದಾರಿ ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಮುಂದಿನ ಕಾರ್ಯ ಚಟುವಟಿಕೆಗಳನ್ನು ನಾನಿನ್ನೂ ನಿರ್ಧರಿಸದ ಕಾರಣ, ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ವಿನಂತಿಸುತ್ತೇನೆ. ಈ ಸ್ಥಾನಕ್ಕೆ ನನ್ನನ್ನು ಪರಿಗಣಿಸಿದ್ದಕ್ಕಾಗಿ ನಿಮಗೆ ಧನ್ಯವಾದ" ಎಂದು ಪ್ರಶಾಂತ್ ಕಿಶೋರ್ ಪಂಜಾಬ್ ಸಿಎಂಗೆ ಪತ್ರ ಬರೆದಿದ್ದಾರೆ.
ಮುಂದಿನ ವರ್ಷ ಅಂದರೆ, 2022 ರ ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಪ್ರಧಾನ ಸಲಹೆಗಾರ ಹುದ್ದೆಯಿಂದ ಪ್ರಶಾಂತ್ ಹಿಂದೆ ಸರಿದಿರುವುದು ಕ್ಯಾಪ್ಟನ್ ಅಮರೀಂದರ್ ಸಿಂಗ್ಗೆ ಆಗಿರುವ ಹಿನ್ನಡೆ ಎಂದೇ ಹೇಳಬಹುದು.
ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ - ಠಾಕ್ರೆ ಸರ್ಕಾರದ ಗುದ್ದಾಟ.. ಮರಾಠಾವಾಡ್ಗೆ ಗವರ್ನರ್ ಪ್ರವಾಸ
ಇತ್ತೀಚೆಗೆ ಪಂಜಾಬ್ ಸಿಎಂ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ಏರ್ಪಟ್ಟಿದ್ದ ಶೀತಲ ಸಮರವನ್ನು ಶಮನಗೊಳಿಸುವಲ್ಲಿ ಪ್ರಶಾಂತ್ ದೊಡ್ಡ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಚುನಾವಣೆ ಹೊಸ್ತಿಲಲ್ಲಿ ಪಕ್ಷದಲ್ಲಿ ಉಂಟಾಗಲಿದ್ದ ಬಿರುಕು ತಡೆಯುವಲ್ಲಿ ಯಶಸ್ವಿಯಾಗಿದ್ದರು.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ, ಮಹಾರಾಷ್ಟ್ರದ ಮಹಾ ಅಗಾಡಿ ಸರ್ಕಾರ ಸೇರಿದಂತೆ ಎನ್ಡಿಎ ವಿರೋಧಿ ಬಣದ ಹಲವು ಪಕ್ಷಗಳ ಗೆಲುವಲ್ಲಿ ಪ್ರಶಾಂತ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವರ್ಷದ ಮಾರ್ಚ್ನಲ್ಲಿ ಅವರು ಪಂಜಾಬ್ ಸಿಎಂ ಪ್ರಧಾನ ಸಲಹೆಗಾರರಾಗಿ ನೇಮಕಗೊಂಡಿದ್ದರು.
ಇತ್ತೀಚೆಗೆ ಶರದ್ ಪವಾರ್ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಸಿದ್ದ ಪ್ರಶಾಂತ್, 2024 ರ ಸಂಸತ್ ಚುನಾವಣೆಯ ಬಗ್ಗೆ ಚರ್ಚಿಸಿದ್ದರು.