ನವ ದೆಹಲಿ: ಚುನಾವಣಾ ಕಾರ್ಯತಂತ್ರಗಳ ನಿಪುಣ ಪ್ರಶಾಂತ್ ಕಿಶೋರ್ ಇಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾಡಿ ಮಾತುಕತೆ ನಡೆಸಿದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದ ಕೆಲವೇ ದಿನಗಳ ಅಂತರದಲ್ಲಿ ರಾಹುಲ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.
ದೆಹಲಿಯ ರಾಹುಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ ಉಪಸ್ಥಿತರಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಯುಪಿ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯ ಬಗ್ಗೆ ಅವರು ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರಶಾಂತ್ ಕಿಶೋರ್ ಕಳೆದ ಜೂನ್ 11 ರಂದು ಮುಂಬೈನಲ್ಲಿ ಮೊದಲ ಬಾರಿಗೆ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು. ಜೂ. 21 ರಂದು ದೆಹಲಿಯ ಪವಾರ್ ನಿವಾಸದಲ್ಲಿ ಎರಡನೇ ಬಾರಿಗೆ ಚರ್ಚೆ ನಡೆಸಿದ್ದರು. ಪವಾರ್-ಪ್ರಶಾಂತ್ ಕಿಶೋರ್ ಅವರ ಖಾಸಗಿ ಭೇಟಿಯಲ್ಲಿ ಸುಮಾರು 3 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಇತರೆ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಇಲ್ಲದೆ ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದು ಅಸಾಧ್ಯ ಎಂದು ಶರದ್ ಪವಾರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಪ್ರಶಾಂತ್ ಕಿಶೋರ್ ಹಾಗೂ ರಾಹುಲ್ ಗಾಂಧಿ ಅವರ ಭೇಟಿ ಚರ್ಚೆಗೆ ಗ್ರಾಸವಾಗಿದೆ.