ನವದೆಹಲಿ: ಸರಿಯಾದ ವಿವೇಚನೆಯಿಲ್ಲದೆ ಮತ್ತು ಕಾನೂನನ್ನು ಸೂಕ್ತವಾಗಿ ಪರಿಗಣಿಸದೆ ಬಂಧನದ ಅಧಿಕಾರವನ್ನು ಚಲಾಯಿಸಿದಾಗ, ಅದು ಅಧಿಕಾರದ ದುರುಪಯೋಗವಾಗುತ್ತದೆ ಹಾಗೂ ಆ ಕೃತ್ಯವು ಅರ್ಜಿದಾರರ ವಿರುದ್ಧ ನಿರ್ದಯವಾಗಿ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯನ್ನು ಬಳಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವಾರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಜಾಮೀನು ನೀಡುವಾಗ ಸೋಮವಾರ ಪ್ರಕಟಿಸಿದ ತನ್ನ ಆದೇಶದಲ್ಲಿ ಕೋರ್ಟ್ ಇನ್ನೂ ಹಲವಾರು ಅವಲೋಕನಗಳನ್ನು ಮಾಡಿದೆ.
ಬಂಧನವು ಶಿಕ್ಷೆಯ ಸಾಧನವಾಗಬಾರದು ಮತ್ತು ಅದನ್ನು ಶಿಕ್ಷೆಯ ಸಾಧನವಾಗಿ ಬಳಸಬಾರದು. ಏಕೆಂದರೆ ಇದು ವೈಯಕ್ತಿಕ ಸ್ವಾತಂತ್ರ್ಯವನ್ನು ನಷ್ಟ ಮಾಡಬಹುದಾಗಿದ್ದು, ಇದು ಅಪರಾಧ ಕಾನೂನಿನಿಂದ ಹೊರಹೊಮ್ಮಬಹುದಾದ ಅತ್ಯಂತ ಗಂಭೀರ ಪರಿಣಾಮಗಳಲ್ಲಿ ಒಂದಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರ ನ್ಯಾಯಪೀಠ ಹೇಳಿದೆ. ಕ್ರಿಮಿನಲ್ ಕಾನೂನು ಮತ್ತು ಅದರ ಪ್ರಕ್ರಿಯೆಗಳನ್ನು ಕಿರುಕುಳದ ಸಾಧನವಾಗಿ ಬಳಸಕೂಡದು ಎಂದು ಪೀಠ ಹೇಳಿದೆ.
ಸಿಆರ್ಪಿಸಿಯ ಸೆಕ್ಷನ್ 41 ಸೇರಿದಂತೆ ಒಬ್ಬ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಸರ್ಕಾರವೊಂದರ ಅಸೀಮಿತ ಅಧಿಕಾರಗಳು ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ಗಮನಿಸಿ ಸುರಕ್ಷತಾ ನಿಯಮಗಳನ್ನು ಅಳವಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ತನಿಖೆಯ ಅವಧಿ ಸೇರಿದಂತೆ ಅಪರಾಧ ನ್ಯಾಯ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರವನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ. ಆದಾಗ್ಯೂ ಈ ಅಧಿಕಾರವು ಕಡಿವಾಣಗಳಿಗೆ ಒಳಪಟ್ಟಿದೆ ಎಂದು ಅದು ಗಮನಸೆಳೆದಿದೆ.
ಅರ್ಜಿದಾರರು ಜಾಮೀನಿನ ಮೇಲೆ ಇರುವಾಗ ಟ್ವೀಟ್ ಮಾಡುವುದನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶದ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವೊಲಿಸಲು ಪ್ರಯತ್ನಿಸಿದಾಗ, ಸಕ್ರಿಯ ನಾಗರಿಕನಾಗಿರುವ ಅರ್ಜಿದಾರನು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕುಗಳನ್ನು ಹೊಂದಿರುವುದರಿಂದ ಇಂಥ ಆದೇಶ ನೀಡಲು ಸಾಧ್ಯವಿಲ್ಲ. ಅಲ್ಲದೆ ಜಾಮೀನಿಗೆ ಷರತ್ತುಗಳನ್ನು ವಿಧಿಸುವ ಉದ್ದೇಶಕ್ಕೆ ಇದು ಅಸಮಾನವಾಗಿರುತ್ತದೆ ಎಂದು ಕೋರ್ಟ್ ಹೇಳಿತು.
ಜುಬೇರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ದಾಖಲಿಸಿದ ಎಲ್ಲಾ 6 ಎಫ್‌ಐಆರ್‌ಗಳಲ್ಲಿ ಸುಪ್ರೀಂ ಕೋರ್ಟ್ ಕಳೆದ ವಾರ ಜಾಮೀನು ನೀಡಿತ್ತು ಮತ್ತು ಈ ಎಫ್‌ಐಆರ್‌ಗಳನ್ನು ದೆಹಲಿ ಎಫ್‌ಐಆರ್‌ನೊಂದಿಗೆ ಸೇರಿಸಿತ್ತು.