ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿನ ವಿದ್ಯುತ್ ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರವು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಆರೋಪಿಸಿದ್ದಾರೆ. ದೆಹಲಿಯ ವಿದ್ಯುತ್ ಸಚಿವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅವರು, ದೆಹಲಿ ಸರ್ಕಾರವು ತಪ್ಪು ಮಾಹಿತಿಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಅಂತಾ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಎನ್‌ಸಿಟಿಗೆ ವಿದ್ಯುತ್ ಪೂರೈಸುವ ಕೆಲವು ಎನ್‌ಟಿಪಿಸಿ ಸ್ಟೇಷನ್‌ಗಳ ಕಲ್ಲಿದ್ದಲು ದಾಸ್ತಾನುಗಳ ಅಂಕಿ-ಅಂಶಗಳ ಬಗ್ಗೆ ದೆಹಲಿಯ ವಿದ್ಯುತ್ ಸಚಿವರು ಬರೆದ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್, ದೆಹಲಿಯ ವಿದ್ಯುತ್ ಸಚಿವರು ನೀಡಿರುವ ಅಂಕಿ-ಅಂಶಗಳು ತಪ್ಪಾಗಿರುವುದಾಗಿ ಹೇಳಿದ್ದಾರೆ.
ಸಿಂಗ್ ಅವರ ಪ್ರಕಾರ, ದಾದ್ರಿ ಸ್ಥಾವರದಲ್ಲಿ ಸುಮಾರು 202.40 ಸಾವಿರ ಟನ್‌ಗಳಷ್ಟು ಕಲ್ಲಿದ್ದಲಿದ್ದು, ಇದು 8 ದಿನಗಳವರೆಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಉಂಚಹಾರ್ ಸ್ಥಾವರದಲ್ಲಿ ಸುಮಾರು 97.62 ಸಾವಿರ ಟನ್‌ಗಳಷ್ಟು ಕಲ್ಲಿದ್ದಲು ಇದ್ದು, ಇದು 4 ದಿನಗಳವರೆಗೆ ಸಾಕಾಗುವಷ್ಟು ಇದೆ ಎಂದು ಹೇಳಿದ್ದಾರೆ.
ಕಹಲ್ಗಾಂವ್ ಸ್ಥಾವರದಲ್ಲಿ 187 ಸಾವಿರ ಟನ್ ಕಲ್ಲಿದ್ದಲು ಇದ್ದು, 5 ದಿನಗಳವರೆಗೆ ಸಾಕಾಗುವಷ್ಟು ಇದೆ ಎನ್ನಲಾಗಿದೆ. ಅಂತೆಯೇ ಫರಕ್ಕಾದಲ್ಲಿ 234.22 ಸಾವಿರ ಟನ್ ಕಲ್ಲಿದ್ದಲು ಇದ್ದು, ಇದು 8 ದಿನಗಳಿಗೆ ಸಾಕಾಗುವಷ್ಟಿದೆ. ಮತ್ತು ಜಜ್ಜರ್ ಸ್ಥಾವರದಲ್ಲಿ 162.56 ಸಾವಿರ ಟನ್ ಕಲ್ಲಿದ್ದಲು ಇದ್ದು, 8 ದಿನಗಳಿಗೆ ಸಾಕಾಗುವಷ್ಟು ಇದೆ ಎನ್ನಲಾಗಿದೆ. ಈ ಎಲ್ಲ ಐದು ವಿದ್ಯುತ್ ಸ್ಥಾವರಗಳಲ್ಲಿ 5 ರಿಂದ 8 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರುವುದಾಗಿ ಸಿಂಗ್ ಹೇಳಿದ್ದಾರೆ.
ಸದ್ಯ ದಿನಂಪ್ರತಿಯಂತೆ ಕಲ್ಲಿದ್ದಲನ್ನು ಮರುಪೂರಣ ಮಾಡಲಾಗುತ್ತಿದ್ದು, ದೆಹಲಿ ಸರಕಾರ ಜನರ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿರುವುದಾಗಿ ಇದೇ ವೇಳೆ ಹೇಳಿದ್ದಾರೆ. ದೆಹಲಿ ಸರಕಾರವು ಆಧಾರ ರಹಿತ ಆರೋಪ ಮಾಡುತ್ತಿರುವುದಾಗಿ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಓದಿ : ಪತ್ನಿ ಮೇಲೆ ಸ್ನೇಹಿತನಿಂದ ಅತ್ಯಾಚಾರ ; ವಿರೋಧಿಗಳನ್ನು ಹಣಿಯಲು ಪಾಪಿ ಪತಿಯೊಬ್ಬನ ದುಷ್ಕೃತ್ಯ!