ಬರೇಲಿ(ಉತ್ತರಪ್ರದೇಶ): ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ಪ್ರಕರಣದಲ್ಲಿ ಮೃತಪಟ್ಟ ಇಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೂಸಿಕ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿ ಬಂದಿದೆ. ಇಲಿಯನ್ನು ಹಿಂಸಿಸಿ ಕಾಲುವೆಗೆ ಎಸೆದ ಬಗ್ಗೆ ಪ್ರಾಣಿ ಪ್ರಿಯರೊಬ್ಬರು ಪ್ರಾಣಿ ಹಿಂಸೆ ಕಾಯ್ದೆಯಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡು, ಶವಪರೀಕ್ಷೆ ನಡೆಸಿದ್ದರು.
ಪ್ರಕರಣವೇನು?: ನವೆಂಬರ್ 25 ರಂದು ಬದೌನ್ ಜಿಲ್ಲೆಯ ಪನ್ವಾಡಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಅದನ್ನು ಕಾಲುವೆಗೆ ಎಸೆದಿದ್ದರು. ಇದನ್ನು ಕಂಡಿದ್ದ ಪ್ರಾಣಿಪ್ರಿಯರಾದ ವಿಕೇಂದ್ರ ಶರ್ಮಾ ಅವರು ತಡೆಯಲು ಯತ್ನಿಸಿದರೂ, ಮೂಸಿಕ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿತ್ತು. ಬಳಿಕ ಪ್ರಾಣಿಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯ ಮೇಲೆ ಶರ್ಮಾ ಅವರು ದೂರು ನೀಡಿದ್ದರು.
ಕೇಸ್ ದಾಖಲಿಸಿಕೊಂಡ ಪೊಲೀಸರು, ಇಲಿಯ ಮೃತದೇಹವನ್ನು ಬರೇಲಿಯ ಐವಿಆರ್‌ಐನಲ್ಲಿ ಮರಣೋತ್ತರ ಪರೀಕ್ಷೆಗೆ ನೀಡಿದ್ದರು. ಇಂದು ನಡೆದ ಪರೀಕ್ಷೆಯಲ್ಲಿ ಮೂಸಿಕ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಅದರ ಶ್ವಾಸಕೋಶಗಳು ಊದಿಕೊಂಡಿವೆ. ಲಿವರ್ನಲ್ಲಿ ನೆಕ್ರೋಟಿಕ್ ಬಂದಿತ್ತು. ಹಿಸ್ಟೋಪಾಥಾಲಜಿ ಮತ್ತು ಮೈಕ್ರೋಸ್ಕೋಪಿ ಪರೀಕ್ಷೆಯಲ್ಲಿ ಇಲಿಗೆ ಯಾವುದೇ ರೀತಿಯ ತೊಂದರೆ ಇರಲಿಲ್ಲ ಎಂದು ಐವಿಆರ್‌ಐ ಜಂಟಿ ನಿರ್ದೇಶಕ ಡಾ.ಕೆ.ಪಿ.ಸಿಂಗ್ ತಿಳಿಸಿದ್ದಾರೆ.
ಓದಿ: ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ವ್ಯಕ್ತಿ: ಪ್ರಾಣಿ ಹಿಂಸೆ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ