ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಅಂಚೆ ಮತದಾನ ಸೋಮವಾರ ಪೂರ್ವ ಮಿಡ್ನಾಪುರದಲ್ಲಿ ಪ್ರಾರಂಭವಾಯಿತು. ಗೈರುಹಾಜರಿ ಮತದಾರರು, ವೃದ್ಧರು (80 ವರ್ಷಕ್ಕಿಂತ ಹೆಚ್ಚು) ಮತ್ತು ಮತದಾನ ಕೇಂದ್ರಗಳಿಗೆ ತಲುಪಲು ಸಾಧ್ಯವಾಗದ ವಿಕಲಚೇತನ ಮತದಾರರು ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು.
ಚುನಾವಣಾ ಆಯೋಗವು ಬಿಹಾರ ಚುನಾವಣೆಯಲ್ಲಿ ಈ ವ್ಯವಸ್ಥೆ ಪ್ರಾರಂಭಿಸಿತು. ಈಗ ಪಶ್ಚಿಮ ಬಂಗಾಳದಲ್ಲಿಯೂ ಅದೇ ವ್ಯವಸ್ಥೆ ಮಾಡಲಾಗಿದೆ. ಗೈರು ಹಾಜರು ಮತದಾರರಿಂದ ಅಂಚೆ ಮತಪತ್ರಗಳನ್ನು ಸ್ವೀಕರಿಸಲು ಚುನಾವಣಾ ಆಯೋಗದ ಸಿಬ್ಬಂದಿ ಮನೆ ಮನೆಗೆ ಹೋಗುತ್ತಿದ್ದಾರೆ. ಮೊದಲ ಹಂತದ ಚುನಾವಣೆ ಮಾರ್ಚ್ 27 ರಂದು ನಡೆಯಲಿದ್ದು, ಮೊದಲ ಹಂತದ ಅಂಚೆ ಮತದಾನ ಮಾರ್ಚ್ 25 ರವರೆಗೆ ಮುಂದುವರಿಯಲಿದೆ.
ಇದನ್ನೂ ಓದಿ: ಚುನಾವಣಾ ಆಯುಕ್ತರ ನೇಮಕಾತಿ: ಸುಧಾರಣೆಗೆ ಇದು ಸೂಕ್ತ ಸಮಯ
ಪೂರ್ವ ಮಿಡ್ನಾಪುರದಲ್ಲಿ 5,500 ಮತ್ತು ಪಶ್ಚಿಮ ಮಿಡ್ನಾಪುರದಲ್ಲಿ 9,500 ಗೈರು ಹಾಜರಿ ಮತದಾರರಿದ್ದಾರೆ. ಅಂಚೆ ಮತದಾನಕ್ಕಾಗಿ ಚುನಾವಣಾ ಆಯೋಗ 164 ಸದಸ್ಯರ ತಂಡವನ್ನು ನೇಮಿಸಿದೆ. ಪ್ರತಿ ಗುಂಪು ಓರ್ವ ಮತಗಟ್ಟೆ ಅಧಿಕಾರಿ, ಕೇಂದ್ರ ಪಡೆಯ ಇಬ್ಬರು ಜವಾನರು, ಇಬ್ಬರು ರಾಜ್ಯ ಪೊಲೀಸರು ಮತ್ತು ಒಬ್ಬ ವಿಡಿಯೋಗ್ರಾಫರ್ ಒಳಗೊಂಡಿದೆ.