ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಪೂನಂ ಗುಪ್ತಾಗೆ ಹಣಕಾಸಿನ ಸಮಸ್ಯೆ ಇರಲಿಲ್ಲ. ಆದರೂ, ಆಕೆ ಶಿಕ್ಷಣ ಪಡೆಯಲು ಇನ್ನಿಲ್ಲದ ಕಷ್ಟ ಪಡಬೇಕಾಯಿತು. ಇದಕ್ಕೆ ಕಾರಣ ಮನೆಯ ಶ್ರೀಮಂತಿಕೆಯೇ ಎಂದರೂ ತಪ್ಪಾಗಲಾರದು. ನಾಲ್ವರು ಮಕ್ಕಳಲ್ಲಿ ಒಬ್ಬಳೇ ಹುಡುಗಿಯಾಗಿ ಬೆಳೆದವಳು ಪೂನಂ. ಅಪಾರ ಶ್ರೀಮಂತಿಕೆಯಿಂದ ಬೆಳೆದ ಹೆಣ್ಣು ಮಕ್ಕಳು ಅಷ್ಟೇ ಶ್ರೀಮಂತರ ಮನೆಗೆ ಮದುವೆಯಾಗಿ ಹೋಗುವುದೇ ಜೀವನ ಎಂಬುದನ್ನು ನೋಡಿದ ಈಕೆಗೆ ತಾನೂ ಅವರಂತೆ ಆಗಬಾರದು, ತನ್ನ ಕಾಲ ಮೇಲೆಯೇ ತಾನು ನಿಂತು ಸಾಧಿಸಬೇಕು ಎಂಬ ಛಲ ಮೂಡಿತು. ಆದರೆ, ಮನೆಯ ಪರಿಸ್ಥಿತಿ ಬೇರೆಯದೇ ಇತ್ತು.
ಶಿಕ್ಷಣದಲ್ಲಿ ಪ್ರತಿಭಾನ್ವಿತೆಯಾಗಿದ್ದ ಪೂನಂಗೆ ಉದ್ಯಮಿ ಅಪ್ಪ ಮದುವೆ ಮಾಡಲು ಮುಂದಾದರು. ಓದಿನಲ್ಲಿ ಅತೀವ ಆಸಕ್ತಿಯಿದ್ದ ಈಕೆ ಪದವಿ ಶಿಕ್ಷಣ ನೀಡುವಂತೆ ತಂದೆಯ ಮನವೊಲಿಸಿದರು. ಇದರ ಪರಿಣಾಮ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಮತ್ತು ಅಂತಾರಾಷ್ಟ್ರೀಯ ಉದ್ಯಮ ಮತ್ತು ಮಾರುಕಟ್ಟೆಯಲ್ಲಿ ಎಂಬಿಎ ಪದವಿ ಪಡೆಯಲು ಸಾಧ್ಯವಾಯಿತು. ಇನ್ನೇನು MNCಯಲ್ಲಿ ಕೆಲಸ ಮಾಡಬೇಕು ಎಂದಾಗ ಮತ್ತೆ ಮನೆಯಲ್ಲಿ ಮದುವೆ ಪ್ರಸ್ತಾಪ. ಈ ವೇಳೆ ಬೇರೆ ದಾರಿ ಇಲ್ಲದೇ ಸ್ಕಾಟ್ಲ್ಯಾಂಡ್ನಲ್ಲಿ ನೆಲೆಸಿದ್ದ ವರನೊಂದಿಗೆ ಸಪ್ತಪದಿ ತುಳಿದರು ಪೂನಂ.
ಮದುವೆಯಾದ ಬಳಿಕ ತಮ್ಮ ಕೆಲಸ ಮಾಡುವ ಉದ್ದೇಶವನ್ನು ಗಂಡ ಪುನೀತ್ ಗುಪ್ತಾಗೆ ಅರ್ಥೈಸಿದ ಪೂನಂ ಇದಕ್ಕೆ ಒಪ್ಪಿಗೆಯನ್ನು ಸುಲಭವಾಗಿ ಪಡೆದರು. ಕೆಲಸ ಮಾಡಲು ಅನುಮತಿ ಸಿಕ್ಕರೂ ಕೆಲಸ ಸಿಗುವುದು ಪೂನಂಗೆ ಸವಾಲೇ ಆಯಿತು. ಯಾವುದೇ ಅನುಭವ ಇಲ್ಲದ ಕಾರಣ ನೌಕರಿ ಸಿಗಲಿಲ್ಲ. ಇದರಿಂದಾಗಿ ವೇತನ ಇಲ್ಲದೇ ಕೆಲವು ವರ್ಷ ಚಾರ್ಟೆಡ್ ಅಕೌಂಟೆಟ್ ಆಗಿ ಕಾರ್ಯ ನಿರ್ವಹಿಸಿದರು. ಉದ್ಯಮ ಕುಟುಂಬದಿಂದ ಬಂದ ನಾನ್ಯಾಕೆ ಉದ್ಯಮ ಆರಂಭಿಸಬಾರದು? ಎಂಬ ಆಲೋಚನೆ ಅವರಿಗೆ ಹೊಳೆಯಿತು. ಆಗ ಕೇವಲ ಉದ್ಯಮವಲ್ಲ, ತನ್ನಂತೆ ಇರುವ ಅನೇಕರಿಗೆ ಉದ್ಯೋಗ ನೀಡುವಂತೆ ಆಗಬೇಕು ಎಂದು ನಿರ್ಧರಿಸಿದರು.
ಇದಕ್ಕೆ ಅವರು ಆಲೋಚಿಸಿದ್ದು ಮರು ಬಳಕೆಯ ಉದ್ಯಮ. ಭಾರತೀಯ ಮೂಲದ ಪೂನಂಗೆ ಭಾರತೀಯರ ಮನಸ್ಥಿತಿ ಚೆನ್ನಾಗಿಯೇ ತಿಳಿದಿತ್ತು. ಯಾವುದೇ ವಸ್ತು ಉಪಯುಕ್ತವಲ್ಲ ಎಂದರೂ ಅದನ್ನು ತಿರಸ್ಕರಿಸುವ ಮನೋಭಾವನೆ ಭಾರತೀಯರಿಗೆ ಇರುವುದಿಲ್ಲ. ವಸ್ತು ಎಷ್ಟೇ ಹಳೆಯದಾದರೂ ಅದನ್ನು ಪದೇ ಪದೇ ಬಳಸುವುದು ಸಾಮಾನ್ಯ. ಇದನ್ನೇ ತಮ್ಮ ಉದ್ಯಮಕ್ಕೆ ಅಳವಡಿಸಿಕೊಂಡರು. ತಾವು ನೆಲೆಸಿದ್ದ ಸ್ಥಳದ ಸಮೀಪದಲ್ಲಿದ್ದ ಒಂದು ಕಂಪನಿ ಪೇಪರ್, ಮ್ಯಾಗಜೀನ್, ಪ್ಯಾಕೇಜಿಂಗ್ ವಸ್ತುಗಳನ್ನು ಅನ್ನು ರದ್ದಿ ಎಂದು ಪಕ್ಕದಲ್ಲಿರಿಸಿದ್ದನ್ನು ಕಂಡರು. ಅವುಗಳನ್ನು ತಂದು ಮರು ಬಳಕೆ ಶುರು ಮಾಡಿದರು. ಇದರಿಂದಾಗಿ ಅವರು 2003ರಲ್ಲಿ ಪಿಜಿ ಪೇಪರ್ ಕಂಪನಿಯನ್ನೇ ಸ್ಥಾಪಿಸಿದರು. ಇಂತಹ ಹಲವು ಸಂಸ್ಥೆಗಳನ್ನು ಸ್ಥಾಪಿಸಿ ಪೇಪರ್ ಪಡೆದರೂ ಯಂತ್ರದ ಸಮಸ್ಯೆ ಎದುರಾಯಿತು.
ಈ ಸಂದರ್ಭದಲ್ಲಿ ಇದಕ್ಕಾಗಿ ಯಂತ್ರ ಪಡೆಯಲು ಮನೆಯಲ್ಲಿ ಯಾವುದೇ ಆರ್ಥಿಕ ಸಹಾಯ ಯಾಚಿಸದೇ, ಸರ್ಕಾರದಿಂದ ಲೋನ್ ಪಡೆಯಲು ಮುಂದಾದರು. ಇದಾದ ಬಳಿಕ ಇಟಾಲಿಯನ್ ಕಂಪನಿಯಿಂದ ಒಪ್ಪಿಗೆ ಪಡೆದ ಮಷಿನ್ ತಂದರು. ಮೊದಲ ಬಾರಿಗೆ 40 ಲಕ್ಷ ರೂಪಾಯಿ ಆರ್ಡರ್ ಪಡೆದು ಗೆದ್ದರು. ಹೀಗೆ ತಮ್ಮ ಉದ್ಯಮದಲ್ಲಿ ಯಶಸ್ಸಿನ ನಾಗಾಲೋಟ ಮುಂದುವರೆಸಿದ ಅವರು, 1000 ಕೋಟಿ ರೂ ಟರ್ನೋವರ್ ಮಾಡಿದ್ದಾರೆ. ಇದೇ ಉತ್ಸಾಹದಿಂದ ಅವರು, ಅನೇಕ ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ಪೂನಂ ಮದುವೆಯಾದ ಕೂಡಲೇ ತಾಯಿಯನ್ನು ಕಳೆದುಕೊಂಡರು. ತಮ್ಮ ತಾಯ್ತನದ ವೇಳೆ ಟ್ಯೂಬರ್ಕ್ಯೂಲೊಸಿಸ್ನಿಂದ ಬಳಲಿ 18 ತಿಂಗಳ ಕಾಲ ವೀಲ್ಚೇರ್ನಲ್ಲೇ ಕಳೆದರು. ಮಹಿಳೆಯರು ಆರೋಗ್ಯದ ಬಗ್ಗೆ ಎಷ್ಟು ನಿರ್ಲಕ್ಷ್ಯ ಹೊಂದುತ್ತಾರೆ ಎಂಬುದನ್ನು ಇದೇ ವೇಳೆ ಅರಿತರು. ಹೆಣ್ಣುಮಕ್ಕಳ ಆರೋಗ್ಯದ ಜೊತೆಗೆ ಅವರ ಪರಿಪಾಲನೆಗೆ ಗುಪ್ತಾ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದರು. ಇದರ ಮೂಲಕ ಭಾರತ ಮತ್ತು ಬ್ರಿಟನ್ನ ಅನಾಥ ಮಕ್ಕಳಿಗೆ ಶಿಕ್ಷಣ ನೀಡಲು ನಿರ್ಧರಿಸಿದರು. ಮಹಿಳೆ ಮತ್ತು ಮಕ್ಕಳ ಆರೋಗ್ಯ ವೃದ್ಧಿಗೂ ಕೆಲಸ ಮಾಡುತ್ತಿದ್ದಾರೆ.
ಉದ್ಯಮದ ಜೊತೆ ಸಾರ್ವಜನಿಕ ಸೇವೆಯಲ್ಲೂ ತೊಡಗಿಕೊಂಡಿರುವ ಪೂನಂ ಕೆಲಸ ಮೆಚ್ಚಿ ಅನೇಕ ರಾಷ್ಟ್ರೀಯ ಮತ್ತು ವಿದೇಶಿ ಪ್ರಶಸ್ತಿಗಳು ಬಂದಿವೆ. 2016ರಿಂದ ಇಂಗ್ಲೆಂಡ್ ಮಹಾರಾಣಿಯಿಂದಲೂ ಮೆಚ್ಚುಗೆ ಪಡೆದರು. ಇದೀಗ ಪೂನಂ ಅವರ ಪೇಪರ್ ಕಂಪನಿ 10 ದೇಶದಲ್ಲಿ ಕಚೇರಿ ಹೊಂದಿದೆ. ಭಾರತ, ಚೀನಾ, ಅಮೆರಿಕ, ದುಬೈ, ಈಜಿಪ್ಟ್ ಮತ್ತು ಸ್ವೀಡನ್ ಸೇರಿದಂತೆ 60 ದೇಶಗಳಿಗೆ ಪೇಪರ್ ರಫ್ತು ಮಾಡುತ್ತಿದೆ!.
ಇದನ್ನೂ ಓದಿ: ಉದ್ಯೋಗಿಗಳು ಒಂದು ದಿನ ಸುಖವಾಗಿ ನಿದ್ರಿಸಲೆಂದೇ ರಜೆ ಕೊಟ್ಟ ಬೆಂಗಳೂರಿನ ಕಂಪನಿ!