ದರ್ಭಂಗಾ (ಬಿಹಾರ): ಸಾಮಾನ್ಯವಾಗಿ ವಸ್ತುಗಳು ಕಳವಾಗುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ರಾತ್ರೋರಾತ್ರಿ ಕೆರೆಯೊಂದು ಕಣ್ಮರೆಯಾಗಿದೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.
ಬಿಹಾರದಲ್ಲಿ ಭೂ ಮಾಫಿಯಾ ಹಾವಳಿ ಮಿತಿ ಮೀರಿದೆ. ಭೂ ಮಾಫಿಯಾಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಇಲ್ಲಿನ ದರ್ಭಂಗಾ ಜಿಲ್ಲೆಯ ನೀಮ್ ಪೋಖರ್ನ ನಾಲ್ಕನೇ ವಾರ್ಡ್ನಲ್ಲಿದ್ದ ಕೆರೆಯೊಂದನ್ನು ಮಣ್ಣಿನಿಂದ ಮುಚ್ಚಿದ್ದು, ಜಾಗದ ಸುತ್ತ ಬಿದಿರಿನ ಬೇಲಿಯನ್ನು ಹಾಕಲಾಗಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಭೂ ಮಾಫಿಯಾದವರು ಕೆರೆಯನ್ನು ಮಣ್ಣಿನಿಂದ ಮುಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ ಸತ್ತೋ ಕುಮಾರ್ ಸಹನಿ, ಕಳೆದ 10-15 ವರ್ಷಗಳ ಹಿಂದೆ ಮೀನುಗಾರರ ಸಂಘವೊಂದು ಈ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದರು. ಬಳಿಕ ಕೆಲ ಕಾರಣಗಳಿಂದ ಈ ಮೀನು ಸಾಕಾಣಿಕೆ ನಿಂತಿತು. ಬಳಿಕ ಸುತ್ತಮುತ್ತಲಿನ ಜನರು ಕಸವನ್ನು ತಂದು ಈ ಕೆರೆಗೆ ಹಾಕಿದರು. ಬಳಿಕ ಈ ಕೆರೆ ಕಸದ ಕೊಂಪೆಯಾಗಿ ಮಾರ್ಪಾಡಾಯಿತು. ಕಳೆದ 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಈ ಜಾಗವನ್ನು ತಮ್ಮದೆಂದು ಹೇಳಿ ಮಣ್ಣು ತುಂಬಲು ಶುರು ಮಾಡಿದರು. ಕಳೆದ ಒಂದು ವಾರದ ಹಿಂದೆಯೇ ಕೆರೆ ಮಣ್ಣು ತುಂಬುವ ಕಾರ್ಯ ನಡೆದಿದೆ ಎಂದು ಹೇಳಿದರು.
ಈ ಕೆರೆ ಸರ್ಕಾರಿ ಜಾಗದಲ್ಲಿ ಇತ್ತು. ಇಲ್ಲಿ ಮೀನು ಸಾಕಾಣಿಕೆ ಮಾಡಲು ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಇಲ್ಲಿ ಕೆರೆಗೆ ಮಣ್ಣು ತುಂಬುವ ಕೆಲಸ ನಡೆಯುತ್ತಿದ್ದರೂ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ 35 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ. ಇಲ್ಲಿ ಸರ್ಕಾರಿ ಕೆರೆ ಇತ್ತು. ಆದರೆ ಇದೀಗ ಭೂ ಮಾಫಿಯಾದವರು ಒಂದು ವಾರದಲ್ಲಿ ಈ ಕೆರೆಯನ್ನು ಮುಚ್ಚಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೋಷನ್, ಕೆರೆ ಒತ್ತುವರಿ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಹೇಳಿದರು.
ದರ್ಭಂಗಾದಲ್ಲಿ 200 ಕೆರೆಗಳು ನಾಪತ್ತೆ: ದರ್ಭಂಗಾ ಜಿಲ್ಲೆಯೊಂದರಲ್ಲೇ ಇದುವರೆಗೆ ಸುಮಾರು 200 ಕೆರೆಗಳು ನಾಪತ್ತೆಯಾಗಿವೆ. ಹಳೆಯ ದಾಖಲೆಗಳ ಪ್ರಕಾರ, ಇಡೀ ಜಿಲ್ಲೆಯಲ್ಲಿ 9113 ಕೆರೆಗಳಿದ್ದವು. ದರ್ಭಂಗಾ ನಗರದಲ್ಲೇ ಸುಮಾರು 350ರಿಂದ 400 ಕೆರೆಗಳಿದ್ದವು. ಆದರೆ ಭೂ ಮಾಫಿಯಾದಿಂದ ಈ ಕೆರೆಗಳು ಒತ್ತುವರಿಯಾಗಿದೆ. ಪ್ರಸ್ತುತ ನಗರಸಭೆಯ ದಾಖಲೆ ಪ್ರಕಾರ ಕೆರೆಗಳ ಸಂಖ್ಯೆ 100ರಿಂದ 125ಕ್ಕೆ ಇಳಿದಿದೆ. ಇಲ್ಲಿಯವರೆಗೆ ಸುಮಾರು 200 ಕೆರೆಗಳು ಒತ್ತುವರಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಅರ್ಧಗಂಟೆಯಲ್ಲಿ 2 ಬಾರಿ ಭೂಕಂಪನ; ಮಣಿಪುರ, ಬಂಗಾಳದಲ್ಲೂ ನಡುಗಿದ ಭೂಮಿ