ನವದೆಹಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಅಲಂಕರಿಸಲು ರಾಹುಲ್ ಗಾಂಧಿ ಸಮ್ಮತಿಗಾಗಿ ಕಾಯುತ್ತಿರುವ ಪಕ್ಷದ ಹಂಬಲದ ನಡುವೆ ಅಧ್ಯಕ್ಷರ ಚುನಾವಣೆಯನ್ನು ಮತ್ತೆ ಮುಂದೂಡಲಾಗಿದೆ. ಹೊಸ ಬೆಳವಣಿಗೆಗಳ ಪ್ರಕಾರ ಕಾಂಗ್ರೆಸ್ ಹೊಸ ರಾಷ್ಟ್ರಾಧ್ಯಕ್ಷರು ಬರುವ ದೀಪಾವಳಿಯ ಒಳಗೆ (ಅಕ್ಟೋಬರ್ 24) ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 21ರೊಳಗೆ ಕಾಂಗ್ರೆಸ್ನ ಹೊಸ ಅಧ್ಯಕ್ಷರ ನೇಮಕವಾಗಬೇಕಿತ್ತು. ಆದರೆ ಈಗ ಈ ದಿನಾಂಕವನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ. ಹಬ್ಬದ ಮುನ್ನ ಅಶುಭ ಕಾಲ ಇರುವುದರಿಂದ ಮತ್ತು ಉನ್ನತ ಹುದ್ದೆಯನ್ನು ಒಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ರಾಷ್ಟ್ರಾಧ್ಯಕ್ಷರ ಚುನಾವಣೆಯ ರೂಪುರೇಷೆ ನಿರ್ಧರಿಸಲು ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಮೂವರೂ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವುದರಿಂದ ಈ ಸಭೆ ವರ್ಚುವಲ್ ಮೋಡ್ನಲ್ಲಿ ನಡೆಯಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿಯವರ ತಾಯಿಯನ್ನು ಭೇಟಿಯಾಗಲು ಮೂವರು ಇಟಲಿಗೆ ಕೂಡ ಹೋಗಬಹುದು.
2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ರಾಹುಲ್ ಗಾಂಧಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಆ ಸ್ಥಾನವನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸುತ್ತಿದ್ದಾರೆ. ಮಗನ ರಾಜೀನಾಮೆ ನಂತರ ಪಕ್ಷದ ಕೋರಿಕೆಯ ಮೇರೆಗೆ ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಗಾಂಧಿ ಅವರು ಈಗಾಗಲೇ ತಮ್ಮ ಆರೋಗ್ಯವನ್ನು ಉಲ್ಲೇಖಿಸಿ ಉನ್ನತ ಹುದ್ದೆ ಒಪ್ಪಿಕೊಳ್ಳಲು ನೋ ಎಂದಿದ್ದಾರೆ.
ಇನ್ನು ಉಳಿದವರು ಪ್ರಿಯಾಂಕಾ ಗಾಂಧಿ. ಅವರು ಉಸ್ತುವಾರಿ ವಹಿಸಿಕೊಂಡ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವುದು ಗೊತ್ತಿದೆ. ಪಕ್ಷವು ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಗಾಂಧಿಗಳು ಅಧ್ಯಕ್ಷರ ರೇಸ್‌ನಿಂದ ಹೊರಹೋದರೆ ರಾಜಸ್ಥಾನ ಮುಖ್ಯಮಂತ್ರಿ 71 ವರ್ಷದ ಅಶೋಕ್ ಗೆಹ್ಲೋಟ್ ಈ ಹುದ್ದೆಗೆ ಪ್ರಮುಖ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗದಿದ್ದರೆ ದೇಶದ ಕಾಂಗ್ರೆಸ್ಸಿಗರಿಗೆ ನಿರಾಶೆಯಾಗುತ್ತದೆ. ಅನೇಕ ಜನರು ಮನೆಯಲ್ಲಿ ಕುಳಿತುಕೊಳ್ಳುವಂತಾಗುತ್ತದೆ. ರಾಹುಲ್ ಗಾಂಧಿ ಸಾಮಾನ್ಯ ಕಾಂಗ್ರೆಸ್ಸಿಗರ ಭಾವನೆಗಳನ್ನು ಅರ್ಥಮಾಡಿಕೊಂಡು ಈ ಹುದ್ದೆಯನ್ನು ಸ್ವತಃ ಸ್ವೀಕರಿಸಬೇಕು ಎಂದು ಗೆಹ್ಲೋಟ್ ಹೇಳಿದ್ದರು.