ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿಂದು 4ನೇ ಹಂತದ ಮತದಾನ ನಡೆದಿದ್ದು, ಇದರ ಮಧ್ಯೆ ಕೂಚ್ ಬಿಹಾರದಲ್ಲಿ ಹಿಂಸಾಚಾರ ನಡೆದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ಬಂಗಾಳ 4ನೇ ಹಂತದಲ್ಲಿ ಶೇ. 76ರಷ್ಟು ಮತದಾನ: ಹಿಂಸಾಚಾರದಲ್ಲಿ ನಾಲ್ವರ ಸಾವು
ಮುಂದಿನ ಮೂರು ದಿನಗಳ ಕಾಲ ಕೂಚ್ ಬಿಹಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಭೆ ಹಾಗೂ ರ‍್ಯಾಲಿ ನಡೆಸದಂತೆ ನಿರ್ಬಂಧ ವಿಧಿಸಿದೆ. ಪಶ್ಚಿಮ ಬಂಗಾಳದಲ್ಲಿ 5ನೇ ಹಂತದ ಮತದಾನ ಏಪ್ರಿಲ್ 17ರಂದು ನಡೆಯಲಿದ್ದು, ಕೂಚ್ ಬಿಹಾರದ ಕೆಲವೊಂದು ಕ್ಷೇತ್ರಗಳಿಗೂ ವೋಟಿಂಗ್ ಆಗಲಿದೆ. ಇದರ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
![Politicians Banned](https://etvbharatimages.akamaized.net/etvbharat/prod-images/whatsapp-image-2021-04-10-at-210858_1004newsroom_1618069261_98.jpeg)
ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದರು. ಆದರೆ ಇದೀಗ ನಿರ್ಬಂಧವಿರುವ ಕಾರಣ ಅವರು ಭೇಟಿ ಸಹ ರದ್ದುಗೊಳ್ಳಲಿದೆ. ಇದರ ಮಧ್ಯೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.
ಕೂಚ್ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ಸಿಐಎಸ್ಎಫ್ ಅಧಿಕಾರಿಗಳ ಬಂದೂಕು ಕಸಿದುಕೊಳ್ಳಲು ಮುಂದಾದ ಕಾರಣ ಗುಂಡಿನ ದಾಳಿ ನಡೆಸಲಾಗಿದ್ದು, ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಮಮತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.