ವೇದಾರಣ್ಯಂ (ತಮಿಳುನಾಡು) : ಇಂದು ಮುಂಜಾನೆ ನಾಗೈ ಜಿಲ್ಲೆಯ ವೇದಾರಣ್ಯಂ ಬಳಿಯ ಮುನಂಗಾಡು ಎಂಬಲ್ಲಿ ರಬ್ಬರ್ ದೋಣಿಯೊಂದು ಕಂಡುಬಂದಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ವೇದಾರಣ್ಯಂ ಕೋಸ್ಟ್ ಗಾರ್ಡ್ ಗ್ರೂಪ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ದೋಣಿ 13 ಅಡಿ ಉದ್ದ ಮತ್ತು 3 ಅಡಿ ಅಗಲವಿದ್ದು, ಚೀನಾದಲ್ಲಿ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ದೋಣಿಯಲ್ಲಿ ಕಂಡುಬಂದ ಶ್ರೀಲಂಕಾದಲ್ಲಿ ಬಳಸಲಾಗುವ ನೀರಿನ ಬಾಟಲಿಗಳು, ಪ್ಯಾಡಲ್‌ಗಳು, ಲೈಫ್ ಜಾಕೆಟ್, ಟ್ರಾವೆಲ್ ಬ್ಯಾಗ್ ಮತ್ತು ಒಂದು ಜೊತೆ ಶೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಾದ ನಂತರ ನಾಗೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾವಕರ್ ಮತ್ತು ಕ್ಯೂ ಬ್ರಾಂಚ್ ಪೊಲೀಸರು ತೋಪುತುರೈ ಪ್ರದೇಶದಲ್ಲಿ ತೀವ್ರ ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ, ವಿದೇಶಿಗನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.
ಆ ವ್ಯಕ್ತಿ ಪೋಲೆಂಡ್ನ ವಟಾಟಿಸ್ಟಾ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆತ ವ್ಯತಿರಿಕ್ತ ಉತ್ತರ ನೀಡಿದ್ದಾನೆ. ಪೋಲೆಂಡ್ ನಿಂದ ಶ್ರೀಲಂಕಾಕ್ಕೆ ಬಂದು ಶ್ರೀಲಂಕಾದಿಂದ ರಬ್ಬರ್ ಬೋಟ್ ಮೂಲಕ ಆ.23ರಂದು ಸಂಜೆ ವೇದಾರಣ್ಯಂ ಪಕ್ಕದ ಮುನಂಗಾಡು ಪ್ರದೇಶಕ್ಕೆ ಆಗಮಿಸಿದ್ದ ಎಂದು ಪ್ರಾರ್ಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ನಂತರ ಚೆನ್ನೈಗೆ ತೆರಳಲು ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನಂತೆ. ಈಗ ಒಬ್ಬನೇ ಬೋಟ್‌ನಲ್ಲಿ ಬಂದಿದ್ದಾನೋ ಅಥವಾ ಬೇರೆಯಾವುದಾದರೂ ವಿಷಯಕ್ಕೆ ಇಲ್ಲಿಗೆ ಬಂದಿದ್ದಾನೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತನನ್ನು ನಾಗಪಟ್ಟಣಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆತನನ್ನು ಆಗಸ್ಟ್ 8 ರವರೆಗೆ ಚೆನ್ನೈನ ಪುಝಲ್ ಜೈಲಿನಲ್ಲಿ ಇರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದನ್ನೂ ಓದಿ: ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.: ಪ್ರಸ್ತಾವನೆ ಅನುಮೋದಿಸಿದ ರಕ್ಷಣಾ ಸಚಿವಾಲಯ