ಚೆನ್ನೈ(ತಮಿಳುನಾಡು) : 'ಏನಾದರಾಗು ಮೊದಲು ಮಾನವನಾಗು' ಎಂಬ ಕುವೆಂಪುವಾಣಿ ಅದ್ಭುತ. ಮಾನವರೆಂದ ಮೇಲೆ ಅಲ್ಲಿ ಮಾನವೀಯತೆ ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷ್ಯ ಒದಗಿಸೋ ಸನ್ನಿವೇಶಗಳು ಅಲ್ಲಲ್ಲಿ ಸೃಷ್ಟಿಯಾಗುತ್ತವೆ. ಮನುಷ್ಯರಲ್ಲಿ ಮಾನವೀಯತೆಗೇನೂ ಕೊರತೆಯಿಲ್ಲ. ತಮಿಳುನಾಡಿನಲ್ಲಿ ನಡೆದ ಪ್ರಸಂಗವೊಂದು ಇದಕ್ಕೆ ಜೀವಂತ ನಿದರ್ಶನ.
ಕರ್ನಾಟಕದ ಬೈಕರ್, ತಮಿಳುನಾಡಿನ ಪೊಲೀಸ್, ಔಷಧ ಬಾಟಲಿಯೊಂದು ಸ್ಫೂರ್ತಿದಾಯಕ ಕತೆಯೊಂದನ್ನು ಕಟ್ಟಿಕೊಡುತ್ತವೆ. ಮೈಸೂರಿನಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪದ ಬೆನ್ನಲ್ಲೇ ಮಾನವೀಯತೆ ತುಂಬಿದ ಹೃದಯಸ್ಪರ್ಶಿ ಘಟನೆ ನಡೆದಿದೆ.
ಇದನ್ನೂ ಓದಿ: ವಿಡಿಯೋ ಜೊತೆಜೊತೆಗೆ ಆಡಿಯೋ ಸರದಿ: ಯುವತಿಗಿದೆಯೇ ಪ್ರಭಾವಿ ನಾಯಕನ ಸಹಾಯ'ಹಸ್ತ'?
ಆತನ ಹೆಸರು ಅನ್ನಿ ಅರುಣ್, ಕರ್ನಾಟಕದ ಬೈಕರ್. ತೆಂಕಸಿ ಮೂಲಕ ಪಾಂಡಿಚೇರಿಗೆ ತೆರಳುತ್ತಿದ್ದಾಗ ತಮಿಳುನಾಡಿನ ಪೊಲೀಸ್ ಸಿಬ್ಬಂದಿ ಬೈಕ್ ತಡೆದು ನಿಲ್ಲಿಸುತ್ತಾರೆ. ಅರುಣ್ ಏನೆಂದು ವಿಚಾರಿಸಿದಾಗ ಸರ್ಕಾರಿ ಬಸ್ನಲ್ಲಿ ತೆರಳುತ್ತಿದ್ದ ವೃದ್ಧೆಯೋರ್ವಳು ಔಷಧಿಯ ಬಾಟೆಲ್‌ನ ರಸ್ತೆಯಲ್ಲಿ ಬೀಳಿಸಿಕೊಂಡಿದ್ದಾಗಿ, ಅದನ್ನು ಮಹಿಳೆಗೆ ವಾಪಸ್ ನೀಡಬೇಕೆಂದು ಅರುಣ್ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಇದನ್ನು ಕೇಳಿದ ಅರುಣ್ ಸರ್ಕಾರಿ ಬಸ್ ಹಿಂಬಾಲಿಸಿ, ಔಷಧಿ ಬಾಟಲನ್ನು ಬಸ್ನಲ್ಲಿರುವ ವೃದ್ಧೆಗೆ ತಲುಪಿಸಿದರು.
ಬೈಕ್ ತಡೆದರೆ ಎಲ್ಲಿ ದಂಡ ಹಾಕ್ತಾರೋ ಎಂಬ ಭಯದಲ್ಲಿ ವಾಹನ ಸವಾರರು ಗಲಿಬಿಲಿಗೊಳ್ಳುತ್ತಾರೆ. ಆದ್ಯಾರೋ ಅಪರಿಚಿತ ಮಹಿಳೆ ಔಷಧಿ ಬಾಟಲಿ ಬೀಳಿಸಿಕೊಂಡಿರುವುದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಸಿಬ್ಬಂದಿಯ ಮಾನವೀಯತೆ, ಬೈಕರ್ನ ಕಾರ್ಯ ಮಾನವೀಯತೆಗೆ ಮತ್ತಷ್ಟು ಮೆರಗು ನೀಡುತ್ತವೆ. ಈ ವಿಡಿಯೋ ಬೈಕರ್ನ ಮುಂಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಾಕಷ್ಟು ಜನಮನ್ನಣೆ ಗಳಿಸಿದೆ.