ಹೈದರಾಬಾದ್: ಚುನಾವಣಾ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಿಂದ ತೆಲಂಗಾಣ ಪೊಲೀಸರು ಎಚ್ಚೆತ್ತಿದ್ದು, ಅಂದಿನಿಂದಲೇ ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಕಡಿಮೆ ಮಾಡುವ ಚುನಾವಣಾ ಆಯೋಗದ ಆಶಯದಂತೆ ಪೊಲೀಸರು ಬಿರುಸಿನ ತಪಾಸಣೆ ನಡೆಸಿ ಕೋಟಿ, ಕೋಟಿ ಮೌಲ್ಯದ ನಗದು, ಆಭರಣ, ಇತರ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜಕಾರಣಿಗಳು ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯುವುದಕ್ಕಾಗಿ ಚೆಕ್ ಪೋಸ್ಟ್‌ಗಳನ್ನ ಸ್ಥಾಪಿಸಲಾಗಿದೆ.
ಅದರಂತೆ ಇದುವರೆಗೂ ರಾಜ್ಯಾದ್ಯಂತ ರೂ.377 ಕೋಟಿ ಮೌಲ್ಯದ ನಗ- ನಾಣ್ಯ, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರಿ ಪ್ರಮಾಣದ ವಸ್ತುಗಳನ್ನು ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದರೂ, ಇದರಲ್ಲಿ ರಾಜಕೀಯ ನಾಯಕರ ಯಾವುದೇ ಹಣ ಅಥವಾ ವಸ್ತುಗಳು ನೇರವಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿಲ್ಲ. ಇದು ರಾಜ್ಯದಲ್ಲಿ ಅಚ್ಚರಿಗೆ ಕಾರಣವಾಗಿದ್ದು, ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಕೇವಲ ಅಂಕಿ-ಅಂಶಗಳನ್ನು ತೋರಿಸುವುದಕ್ಕಾಗಿಯೇ ತಪಾಸಣೆ ನಡೆಸಲಾಗುತ್ತಿದೆ ಎಂಬ ಟೀಕೆಗಳು ಕೂಡಾ ವ್ಯಾಪಕವಾಗಿ ವ್ಯಕ್ತವಾಗುತ್ತಿವೆ. ಸೂಕ್ತ ದಾಖಲೆಗಳನ್ನು ತೋರಿಸಿದರೂ ಸಣ್ಣದೊಂದು ನೆಪದಲ್ಲಿ ನಗದು, ಚಿನ್ನಾಭರಣ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಉದ್ಯಮಿಗಳು ಆರೋಪಿಸಿದ್ದಾರೆ.
ವಾಸ್ತವವಾಗಿ, ಸರಿಯಾದ ಸಾಕ್ಷ್ಯವನ್ನು ತೋರಿಸದ ಆಸ್ತಿಯನ್ನು ಮಾತ್ರ ವಶಪಡಿಸಿಕೊಳ್ಳಬೇಕು. ರೂ.50 ಸಾವಿರಕ್ಕಿಂತ ಹೆಚ್ಚಿನ ನಗದು ಕೊಂಡೊಯ್ಯುತ್ತಿದ್ದರೆ ಅದನ್ನು ಎಲ್ಲಿ ಡ್ರಾ ಮಾಡಲಾಗಿದೆ, ಯಾರ ಖಾತೆಯಿಂದ ಡ್ರಾ ಮಾಡಲಾಗಿದೆ ಎಂಬ ವಿವರ ಇದ್ದರೆ ಸಾಕು. ಆಭರಣಗಳ ಖರೀದಿ ರಸೀದಿಗಳನ್ನು ತೋರಿಸಬೇಕು. ಇಷ್ಟೆಲ್ಲ ತೋರಿಸಿದರೂ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿರುವುದು ಇದೀಗ ಭಾರಿ ಟೀಕೆಗೆ ಕಾರಣವಾಗಿದೆ. ಎಲ್ಲ ಸಾಕ್ಷಿ ಇದ್ದರೆ 24 ಗಂಟೆಯೊಳಗೆ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಪೊಲೀಸರು. ಇಡೀ ಪ್ರಕ್ರಿಯೆ ಪೂರ್ಣಗೊಳಿಸಲು ದಿನಗಳೇ ಹಿಡಿಯುತ್ತಿದ್ದು, ಜನಸಾಮಾನ್ಯರು ಪೊಲೀಸ್ ಠಾಣೆ ಅಲೆಯುವಂತಾಗಿದೆ.
ಇದೇ ತಿಂಗಳ 9ರಂದು ಚುನಾವಣಾ ವೇಳಾಪಟ್ಟಿ ಬಿಡುಗಡೆಯಾದ ಬಳಿಕ 28ರವರೆಗೆ 136.09 ಕೋಟಿ ರೂ.ನಗದು, 162.07 ಕೋಟಿ ಮೌಲ್ಯದ ಚಿನ್ನಾಭರಣಗಳು, 28.84 ಕೋಟಿ ಮೌಲ್ಯದ ಮದ್ಯ, 18.18 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಆದಾಯ ತೆರಿಗೆ ಇಲಾಖೆಯ ಲೆಕ್ಕಾಚಾರದ ಪ್ರಕಾರ ವಶಪಡಿಸಿಕೊಂಡ ನಗದು ಹಣದಲ್ಲಿ ಕೇವಲ 2 ಕೋಟಿ ರೂ. ಮಾತ್ರ ರಾಜಕಾರಿಣಿಯದ್ದು ಎನ್ನಲಾಗಿದೆ. ಆದರೆ ಇದು ದೃಢಪಟ್ಟಿಲ್ಲ. ಸರಿಯಾದ ದಾಖಲೆಗಳಿಲ್ಲ ಎಂದು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಅಧಿಕೃತ ಖಾತೆಗಳ ಪ್ರಕಾರ ಉಳಿದ ನಗದು ಮತ್ತು ಚಿನ್ನವು ಸಾಮಾನ್ಯ ಜನರು ಮತ್ತು ಉದ್ಯಮಿಗಳಿಗೆ ಸೇರಿದೆ.
ಇದನ್ನು ಓದಿ:ತೆಲಂಗಾಣ ಚುನಾವಣೆ.. ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಅಜರುದ್ದೀನ್ಗೆ ಸ್ಥಾನ, ಕೃತಜ್ಞತೆ ಸಲ್ಲಿಸಿದ ಮಾಜಿ ನಾಯಕ