ಹೋಶಿಯಾರ್‌ಪುರ(ಪಂಜಾಬ್): ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾದ ನಂತರ ಪಂಜಾಬ್ ಪೊಲೀಸರು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆಯೇ ಪೊಲೀಸರ ಒಂದು ಕ್ರಮ ಈಗ ಟೀಕೆ, ವಿವಾದಕ್ಕೆ ಕಾರಣವಾಗಿದೆ. ಡ್ರಗ್ಸ್ ಸಾಗಣೆ ಆರೋಪದ ಮೇಲೆ 13 ಮಂದಿ ಮೇಲೆ ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದು, ಇದರಲ್ಲಿ ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಯುವಕನ ಹೆಸರಿದೆ. ಇದು ಪೊಲೀಸರ ಕಾರ್ಯದ ಮೇಲೆಯೇ ಅನುಮಾನ ಮೂಡಿಸಿದೆ.
ಗರ್‌ಶಂಕರ್ ಪೊಲೀಸರು ಮೇ 20 ರಂದು ಡೊನೊವಾಲ್ ಖುರ್ದ್ ಗ್ರಾಮದಲ್ಲಿ ಮಾದಕವಸ್ತು ಸಾಗಣೆ ಆರೋಪದ ಮೇಲೆ 4 ಜನರನ್ನು ಬಂಧಿಸಿದ್ದಾರೆ. 6 ಮಹಿಳೆಯರು ಸೇರಿದಂತೆ 13 ಜನರ ವಿರುದ್ಧ ಪ್ರಕರಣವೂ ದಾಖಲಿಸಿದ್ದಾರೆ. ಆದರೆ, ಎರಡೂವರೆ ವರ್ಷದ ಹಿಂದೆ ಮೃತಪಟ್ಟ ಗ್ರಾಮದ ಗುರುದೀಪ್ ಸಿಂಗ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಗುರುದೀಪ್ ಅವರ ಕುಟುಂಬಕ್ಕೆ ಮಾಹಿತಿ ಸಿಕ್ಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುದೀಪ್ಸಿಂಗ್ 2019ರ ಡಿಸೆಂಬರ್ 6 ರಂದು ಸಾವನ್ನಪ್ಪಿದ್ದಾನೆ. ಎರಡೂವರೆ ವರ್ಷ ಕಳೆದಿದ್ದು, ಮರಣ ಪ್ರಮಾಣಪತ್ರವೂ ಇದೆ. ಗರ್‌ಶಂಕರ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತನ್ನ ಮೃತ ಮಗನನ್ನು ತಪ್ಪಿತಸ್ಥನನ್ನಾಗಿ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಇದು ನಮ್ಮ ಕುಟುಂಬದ ಮೇಲೆ ಸಮಾಜದಲ್ಲಿ ಕಳಂಕ ತರುವ ವಿಷಯವಾಗಿದೆ. ಈ ಬಗ್ಗೆ ಗೆಜೆಟೆಡ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕುಟುಂಬಸ್ಥರು ಚಂಡೀಗಢ ಹೋಶಿಯಾರ್‌ಪುರ ಪೊಲೀಸ್ ಮುಖ್ಯಸ್ಥ ಮತ್ತು ಎಸ್‌ಸಿ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆಗೆ ನಿಷೇಧ: 122 ವರ್ಷಗಳ ಇತಿಹಾಸಕ್ಕೆ ತಿಲಾಂಜಲಿ?