ನವದೆಹಲಿ: ಯುವ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಇತರ 19 ಮಂದಿ ವಿರುದ್ಧ ಇದೀಗ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಐವರು ತಲೆಮರೆಸಿಕೊಂಡಿದ್ದು, ಅವರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.
ಮೇ. 4ರ ಮಧ್ಯರಾತ್ರಿ 23 ವರ್ಷದ ಕುಸ್ತಿಪಟು ಸಾಗರ್ ಧನ್ಕರ್ ಹಾಗೂ ಆತನ ಸ್ನೇಹಿತರಾದ ಸೋನು ಹಾಗೂ ಅಮಿತ್ ಕುಮಾರ್ ಮೇಲೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಸಹಚರರು ಹಲ್ಲೆ ನಡೆಸಿದ್ದರು ತತ್ಪರಿಣಾಮ ಸಾಗರ್ ಧನ್ಕರ್ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಾಕ್ಷ್ಯದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದು ಸ್ಪಷ್ಟವಾಗಿತ್ತು.
ಇದನ್ನೂ ಓದಿರಿ: ಡಿಜಿಟಲ್ ಪಾವತಿ 'e-RUPI' ನಮೋ ಚಾಲನೆ... ಭವಿಷ್ಯದ ಸುಧಾರಣೆಗಳಲ್ಲಿ ಇದು ಒಂದು ಎಂದ ಮೋದಿ
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ ಅವರಿಗೆ ಈ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಚಾರ್ಜ್ಶೀಟ್ನಲ್ಲಿ ಸುಶೀಲ್ ಕುಮಾರ್ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಧಂಕರ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಇದಾದ ಬಳಿಕ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಕುಸ್ತಿಪಟು ಸುಶೀಲ್ ಕುಮಾರ್ ತಲೆ ಮರೆಸಿಕೊಂಡಿದ್ದರು. ಆದರೆ, ಇವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿತ್ತು.