ಕಾಸರಗೋಡು(ಕೇರಳ) : ಕಳ್ಳರ ಬಂಧನಕ್ಕಾಗಿ ಪೊಲೀಸರು ಇನ್ನಿಲ್ಲದ ಯೋಜನೆ ರೂಪಿಸಿ ತಮ್ಮ ಖೆಡ್ಡಾಕ್ಕೆ ಕೆಡವಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಕೇರಳ ಪೊಲೀಸರು ಆರೋಪಿ ಬಂಧನಕ್ಕಾಗಿ ಆತನ ಹೆಸರಿನಲ್ಲೇ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದಾರೆ.
ಕೇರಳ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಸಲ ದರೋಡೆಕೋರನ ಬಂಧನಕ್ಕಾಗಿ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಲಾಗಿದೆ. ಕಾಸರಗೋಡಿನ ಹೊಸದುರ್ಗ ಪೊಲೀಸರು ಈ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ಮಡಿಕ್ಕಾಯಿ ಗ್ರಾಮದ ಕಳ್ಳನೋರ್ವ ಗೃಹಿಣಿ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಪೊಲೀಸರು ಶೋಧಕಾರ್ಯ ನಡೆಸಿ, ಅದರಲ್ಲಿ ವಿಫಲರಾಗಿದ್ದರು. ಹೀಗಾಗಿ, ಕಳ್ಳನ ಹೆಸರಿನಲ್ಲೇ ವಾಟ್ಸ್‌ಆ್ಯಪ್ ಗ್ರೂಪ್ ರಚಿಸುವ ಆಲೋಚನೆ ಮಾಡಿದ್ದಾರೆ.
ಇದನ್ನೂ ಓದಿ: 'ಆರ್ಆರ್ಆರ್' ಸಾಂಗ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ.. ನಿರ್ದೇಶಕ ರಾಜಮೌಳಿ ಹೇಳಿದ್ದೇನು?
'ಕಳ್ಳ ಅಶೋಕನ್'(Kallan Asokan) ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿದ್ದು, ಅದರಲ್ಲಿ ಮಡಿಕ್ಕಾಯಿ ಗ್ರಾಮದ ಸದಸ್ಯರನ್ನ ಸೇರಿಸಲಾಗಿದೆ. ಈಗಾಗಲೇ 251 ಸದಸ್ಯರು ಈ ಗ್ರೂಪ್ನಲ್ಲಿದ್ದು, ಕಳ್ಳನ ಚಲನವಲನಗಳ ಬಗ್ಗೆ ಇದರಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.
ಇದರ ಸಹಾಯದಿಂದಲೇ ಅಶೋಕನ್ ಆಪ್ತ ಸಹಾಯಕ ಮಂಜುನಾಥನ್ನನ್ನ ಬಂಧನ ಮಾಡಿರುವ ಪೊಲೀಸರು ಅಶೋಕನ್ಗೋಸ್ಕರ ಬಲೆ ಬೀಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 400 ಎಕರೆ ಸರ್ಕಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಆತ ಬಚ್ಚಿಟ್ಟುಕೊಂಡಿದ್ದಾನೆಂದು ಹೇಳಲಾಗುತ್ತಿದೆ.