ನಂದ್ಯಾಲ( ಆಂಧ್ರಪ್ರದೇಶ): ನಂದ್ಯಾಲದಲ್ಲಿ ಪೊಲೀಸ್ ಕಾನ್ಸ್ಟೇಬಲ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಾಳಿಕೋರರು ಮಚ್ಚಿನಿಂದ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಮೃತ ಸುರೇಂದ್ರ ನಂದ್ಯಾಲ ಡಿಎಸ್‌ಪಿ ಕಚೇರಿಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ಕೆಲವರು ದುಷ್ಕರ್ಮಿಗಳು ಆಟೋದಲ್ಲಿ ಹಿಂಬಾಲಿಸಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಂಧ್ರಪ್ರದೇಶದಲ್ಲಿ ಕಾನ್ಸ್‌ಟೇಬಲ್ ಹತ್ಯೆ: ಸುರೇಂದ್ರ (38) ಎಂಬ ಪೊಲೀಸ್ ಕಾನ್ಸ್ಟೇಬಲ್ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಾನುವಾರ ರಾತ್ರಿ ಕರ್ತವ್ಯ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳಿದ್ದರು. ಬಳಿಕ ಸುರೇಂದ್ರ ರಾತ್ರಿ ತಿರುಪತಿಗೆ ಹೋಗಲು ತಯಾರಿ ನಡೆಸಿದ್ದರು. ಈ ವೇಳೆ, ಹರಿದ ಬ್ಯಾಗ್ ಹೊಲಿಸಲು ಮತ್ತು ಹೊಸ ಚಾರ್ಜರ್ ಖರೀದಿಸಲು ಅಂಗಡಿಗೆ ತೆರಳಿದ್ದರು. ಟ್ಯಾಟೂ ಅಂಗಡಿ ಬಳಿ ಕೆಲ ಪುಂಡರು ಪಾನಮತ್ತರಾಗಿದ್ದರು. ಪುಂಡರು ಮತ್ತು ಕಾನ್ಸ್‌ಟೇಬಲ್ ಸುರೇಂದ್ರ ನಡುವೆ ಜಗಳವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇವರ ಜಗಳ ವಿಕೋಪಕ್ಕೆ ತಿರುಗಿದಾಗ ಪುಂಡರು ತಮ್ಮಲ್ಲಿದ್ದ ಬಿಯರ್ ಬಾಟಲಿಗಳಿಂದ ಸುರೇಂದ್ರನ ತಲೆ ಮೇಲೆ ಹಲ್ಲೆ ನಡೆಸಿದ್ದಾರೆ. ಆರು ಮಂದಿ ಆರೋಪಿಗಳಿದ್ದ ಕಾರಣ ಸುರೇಂದ್ರ ತಪ್ಪಿಸಿಕೊಳ್ಳಲು ಪದ್ಮಾವತಿ ಸರ್ಕಲ್ ಕಡೆಗೆ ಓಡಿದ್ದಾರೆ. ಆರೋಪಿಗಳು ಪೊಲೀಸರನ್ನ ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಸಮೀಪದ ಆಟೋ ಚಾಲಕನನ್ನು ಹೆದರಿಸಿ, ಥಳಿಸಿ, ಹಲ್ಲೆ ಮಾಡಿದ್ದಾರೆ.

ಬಳಿಕ ಅದೇ ಆಟೋದಲ್ಲಿ ಪೊಲೀಸ್ ಕಾನ್ಸ್ಟೇಬಲ್ನನ್ನು ಕರೆದೊಯ್ದಿದ್ದಾರೆ. ನಂದ್ಯಾಲ ಕೆರೆ ಕಟ್ಟೆ ಬಳಿ ಕರೆದೊಯ್ದು ಎದೆಗೆ ಮತ್ತು ಬೆನ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾನ್ಸ್ಟೇಬಲ್ನನ್ನು ಆಟೋ ಚಾಲಕ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದಾರಿ ಮಧ್ಯೆದಲ್ಲೇ ಕಾನ್ಸ್‌ಟೇಬಲ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಎಲ್ಲ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ನಡೆದಿರುವುದು ಆಕಸ್ಮಿಕವೋ ಅಥವಾ ಯೋಜಿತವೋ ಎಂಬುದು ತಿಳಿಯಬೇಕಿದೆ. ರೌಡಿ ಶೀಟರ್ ಪ್ರಮುಖ ಪಾತ್ರಧಾರಿ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಸುದ್ದಿ ತಿಳಿದ ಮೃತ ಪೋಷಕರ ರೋದನೆ ಮುಗಿಲು ಮುಟ್ಟಿತ್ತು. ಮೃತರ ಕುಟುಂಬಸ್ಥರು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ರೌಡಿ ಶೀಟರ್‌ಗಳಿಂದ ಹತ್ಯೆಗೀಡಾದ ಪೊಲೀಸ್ ಪೇದೆ ಸುರೇಂದ್ರಗೆ ಜಿಲ್ಲಾ ಎಸ್ಪಿ ರಘುವೀರರೆಡ್ಡಿ, ಎಎಸ್ಪಿ ರಮಣ ಶ್ರದ್ಧಾಂಜಲಿ ಅರ್ಪಿಸಿದರು. ಸುರೇಂದ್ರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಪೊಲೀಸರನ್ನು ಕೊಂದರೆ ಜನರ ರಕ್ಷಣೆ ಏನು ಎಂದು ಸುರೇಂದ್ರ ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದು, ಈ ಹತ್ಯೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಹಂತಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಓದಿ: ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಮಾಸ್ ಕಾಪಿ: ಉಪನ್ಯಾಸಕಿಗೆ ಕೊಲೆ ಬೆದರಿಕೆ- ವಿಡಿಯೋ ವೈರಲ್