ಪ್ರಯಾಗರಾಜ್: ವ್ಯಾಪಾರಿಯೊಬ್ಬರ ಪುತ್ರನನ್ನು ಅಪಹರಿಸಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣವನ್ನು ಪೊಲೀಸರು ಸಕಾಲಕ್ಕೆ ಭೇದಿಸಿದ್ದು, ಅಪಹರಣಗೊಂಡ ಯುವಕನನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂದಿಸಲಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಬಲೆ ಬೀಸಲಾಗಿದೆ. ಪ್ರಕರಣವನ್ನು ಯಶಸ್ವಿಯಾಗಿ ಬಗೆಹರಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತ ರಮಿತ್ ಶರ್ಮಾ 25,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಧುಮನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಗೆಸ್ಟ್ ಹೌಸ್ ಒಂದರ ಮಾಲೀಕ ಭೀಮ್ ಸಿಂಗ್ ಎಂಬುವರ ಪುತ್ರ ವಾಸು ಸಿಂಗ್ ಎಂಬಾತನನ್ನು ಮೂವರು ಸೇರಿ ಅಪಹರಿಸಿದ್ದರು. ಮಂಗಳವಾರ ರಾತ್ರಿ ವಾಸು ತನ್ನ ಗೆಸ್ಟ್ ಹೌಸ್ನಿಂದ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು.
ಪೊಲೀಸರ ಪ್ರಕಾರ, ವಾಸುನನ್ನು ಆತನ ನೆರೆಹೊರೆಯಲ್ಲಿಯೇ ವಾಸಿಸುವ ನಿವೃತ್ತ ಯೋಧನ ಮಗ ಸರ್ವೇಶ್ ಸಿಂಗ್ ಎಂಬಾತ ಜೊತೆಗೆ ಕರೆದುಕೊಂಡು ಹೋಗಿದ್ದಾನೆ. ಅದೇ ಊರಿನವನಾದ ಸರ್ವೇಶ್ ವಾಸು ಜೊತೆ ಸ್ನೇಹಿತನಾಗಿದ್ದ ಕಾರಣ ವಾಸು ಸರ್ವೇಶ್ ಇಬ್ಬರೂ ಕಾರಿನಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ವಾಸು ಪ್ರಜ್ಞೆ ತಪ್ಪಿದ್ದಾನೆ.
ಇದಾದ ನಂತರ ಕಾರಿನಲ್ಲಿದ್ದ ಮೂವರು ದುಷ್ಕರ್ಮಿಗಳು ಪ್ರಜ್ಞಾಶೂನ್ಯನಾಗಿದ್ದ ವಾಸುನನ್ನು ನಗರದಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ರಾತ್ರಿ ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ಕಂಡು ವಾಪಸ್ ಬಂದಿದ್ದಾರೆ. ಇದಾದ ನಂತರ, ಅಪಹರಣಕ್ಕೊಳಗಾಗಿದ್ದ ವಾಸುವನ್ನು ಧುಮನಗಂಜ್ ಪ್ರದೇಶದ ಫ್ಲ್ಯಾಟ್‌ಗೆ ಕರೆದೊಯ್ದು ಅಲ್ಲಿ ಆತನನ್ನು ಕೂಡಿ ಹಾಕಿ ಬೀಗ ಹಾಕಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಸರ್ವೇಶ್ ಸಿಂಗ್ ಈತ ಈ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದ.
ನಂತರ ರಾತ್ರಿ ಎರಡು ಗಂಟೆಗೆ ಸುಮಾರಿಗೆ ವಾಸುವಿನ ಫೋನ್‌ನಿಂದ ಸರ್ವೇಶ್ ಆತನ ತಂದೆಗೆ ಕರೆಮಾಡಿ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ಈ ವಿಷಯ ಪೊಲೀಸರಿಗೆ ತಿಳಿಸಿದರೆ ವಾಸುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಮತ್ತೊಂದೆಡೆ ಮಗ ವಾಸು ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಗೆ ಬಾರದ ಕಾರಣ ಮನೆಯವರು ಇದಕ್ಕೂ ಮುನ್ನವೇ ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ಮಧ್ಯೆ ಹಣ ನೀಡುವಂತೆ ಫೋನ್ ಬಂದ ತಕ್ಷಣ ಪೊಲೀಸರು ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಲೊಕೇಶನ್ಗೆ ತೆರಳಿ ವಾಸುವನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪುತ್ರ ಸಂತಾನವಿಲ್ಲದ ಉದ್ಯಮಿಗಾಗಿ 8 ತಿಂಗಳ ಮಗು ಕಿಡ್ನಾಪ್.. ಇಬ್ಬರು ಮಹಿಳೆಯರು ಸೇರಿ 7 ಜನರ ಗ್ಯಾಂಗ್ ಅರೆಸ್ಟ್