ನವದೆಹಲಿ: ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಉಲ್ಬಣ ಕುರಿತ ವರದಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಸನ್ನದ್ಧತೆಯನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ. ಉಸಿರಾಟದ ಕಾಯಿಲೆಗಳ ಬಗ್ಗೆ ಪೂರ್ವಸಿದ್ಧತಾ ಕ್ರಮಗಳನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸದ್ಯಕ್ಕೆ ವರದಿಯಾಗುತ್ತಿರುವ ಇನ್ಫ್ಲುಯೆಂಜಾ ಮತ್ತು ಚಳಿಗಾಲದ ಕಾರಣದ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದನ್ನು ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆವನ್ನು ತಕ್ಷಣವೇ ಪರಿಶೀಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಇನ್ಫ್ಲುಯೆಂಜಾಕ್ಕೆ ಸಂಬಂಧಿಸಿದಂತೆ ಬೆಡ್ಗಳು, ಔಷಧಗಳು ಮತ್ತು ಲಸಿಕೆಗಳ ಲಭ್ಯತೆ, ವೈದ್ಯಕೀಯ ಆಮ್ಲಜನಕ, ರಕ್ಷಣಾ ಸಾಧನಗಳು, ಪರೀಕ್ಷಾ ಕಿಟ್‌ಗಳು ಮತ್ತು ಕಾರಕಗಳು, ಆಮ್ಲಜನಕ ಘಟಕಗಳ ಮತ್ತು ವೆಂಟಿಲೇಟರ್‌ಗಳ ಕಾರ್ಯ ಹಾಗೂ ಸೋಂಕು ನಿಯಂತ್ರಣ ಕುರಿತು ಆಸ್ಪತ್ರೆಗಳ ಸನ್ನದ್ಧತೆ ಬಗ್ಗೆ ಸೂಚನೆ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಇನ್ಫ್ಲುಯೆಂಜಾದಂತಹ ಅನಾರೋಗ್ಯ (ILI) ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ (SARI) ಕುರಿತು ಪರಿಷ್ಕೃತ ನಿಗಾ ಕಾರ್ಯತಂತ್ರಕ್ಕಾಗಿ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ILI ಮತ್ತು SARI ಕಾಯಿಲೆಗಳ ವಿಶೇಷವಾಗಿ ಮಕ್ಕಳು ಮತ್ತು ಯುವಕರಲ್ಲಿ ಸಮಗ್ರ ರೋಗ ಕಣ್ಗಾವಲು ಯೋಜನೆ (Integrated Disease Surveillance Project - IDSP)ಯ ಜಿಲ್ಲಾ ಮತ್ತು ರಾಜ್ಯ ಕಣ್ಗಾವಲು ಘಟಕಗಳಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ILI/SARI ದತ್ತಾಂಶವನ್ನು ಐಡಿಎಸ್ಪಿ- ಐಹೆಚ್ಐಪಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವ ಅಗತ್ಯ ಎಂದೂ ಕೇಂದ್ರ ನಿರ್ದೇಶನ ನೀಡಿದೆ.
SARI ಹೊಂದಿರುವ ರೋಗಿಗಳು, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೂಗು ಮತ್ತು ಗಂಟಲಿನ ಸ್ವ್ಯಾಬ್ ಮಾದರಿಗಳನ್ನು ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ರವಾನಿಸಬೇಕೆಂದು ಕೇಂದ್ರ ಹೇಳಿದೆ. ಮತ್ತೊಂದೆಡೆ, ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಹಂಚಿಕೊಂಡ ಮಾಹಿತಿಯ ಪ್ರಕಾರ, ಚೀನಾದ ಉತ್ತರ ಭಾಗಗಳಲ್ಲಿ ಉಸಿರಾಟದ ಕಾಯಿಲೆ ಹೆಚ್ಚಾಗಿದೆ. ಇದು ಮುಖ್ಯವಾಗಿ ಇನ್ಫ್ಲುಯೆಂಜಾ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು SARS-CoV-2ನಂತಹ ಸೋಂಕಿಗೆ ಕಾರಣವಾಗಿದೆ.
ಇದನ್ನೂ ಓದಿ: ಚೀನಾ ನ್ಯೂಮೋನಿಯಾ ಪ್ರಕರಣ; ಭಾರತದಲ್ಲಿ ಕಣ್ಗಾವಲಿಗೆ ಕರೆ ನೀಡಿದ ವೈದ್ಯರು