ನವದೆಹಲಿ: ಕಣ್ಣಿನ ಆಸ್ಪತ್ರೆಗಳನ್ನು ನಡೆಸುತ್ತಿರುವ ಪ್ರವರ್ತಕರ ಮೇಲೆ ವಿವಾದಗಳನ್ನು ಪರಿಹರಿಸಲು ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಯಾಂಕ್ ತಿವಾರಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಸಿಬಿಸಿ ದಾಳಿ ಮಾಡಿ ಪರಿಶೀಲನೆ ಕೈಗೊಂಡಿತ್ತು. ಶೋಧದ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ. ಆದರೆ, ತಿವಾರಿ ಅವರನ್ನು ಇನ್ನೂ ಬಂಧಿಸಲಾಗಿಲ್ಲ.
ಪ್ರಧಾನಿ ಕಾರ್ಯಾಲಯದ (ಪಿಎಂಒ) ಅಧಿಕಾರಿಯಂತೆ ನಟಿಸಿ ವಿವಾದ ಬಗೆಹರಿಸುವಂತೆ ಒತ್ತಡ ಹೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಿಬಿಐ ಇದೀಗ ತನಿಖೆ ಆರಂಭಿಸಿದೆ. ಈ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅಹಮದಾಬಾದ್‌ನಲ್ಲಿರುವ ಮಯಾಂಕ್ ತಿವಾರಿ ಅವರ ಆವರಣದಲ್ಲಿ ಶೋಧ ನಡೆಸಿತು. ಇಂದೋರ್‌ನ ಆಸ್ಪತ್ರೆಯೊಂದರ ಪ್ರವರ್ತಕರ ಮೇಲೆ ಆರೋಪಿಗಳು 16 ಕೋಟಿ ರೂಪಾಯಿ ಬಾಕಿಯನ್ನು ಪಾವತಿಸದಂತೆ ಒತ್ತಡ ಹೇರಿದ್ದರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಬಿಐ ತಂಡ ತನ್ನ ಶೋಧದ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇಂದೋರ್ ಆಸ್ಪತ್ರೆಯು ಇನ್ನೊಂದು ಆಸ್ಪತ್ರೆಗೆ 16 ಕೋಟಿ ರೂಪಾಯಿ ಪಾವತಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ತಿವಾರಿ ಅವರು ತಮ್ಮ ಮೊಬೈಲ್ ಫೋನ್‌ನಿಂದ ಕರೆಗಳು ಮತ್ತು ಸಂದೇಶಗಳ ಮೂಲಕ ಆಸ್ಪತ್ರೆಯೊಂದಿಗಿನ ವಿವಾದವನ್ನು ಪರಿಹರಿಸುವಂತೆ ಇಂದೋರ್‌ನ ಖಾಸಗಿ ಆಸ್ಪತ್ರೆಯ ಪ್ರವರ್ತಕರನ್ನು ಕೇಳಿದ್ದಾರೆ ಎಂದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ.
ಇಂದೋರ್‌ನಲ್ಲಿರುವ ಆಸ್ಪತ್ರೆಯು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲು ಪ್ರಾರಂಭಿಸಿದೆ. ನಂತರ ವಿವಾದ ಉಂಟಾಗಿದೆ ಮತ್ತು ಹಣವನ್ನು ನೀಡಿದವರು ವಾಪಸ್ ತಮ್ಮ ಹಣವನ್ನು ಹಿಂತಿರುಗಿಸಬೇಕು ಎಂದು ಕೇಳಿದ್ದರು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವಿವಾದವನ್ನು ಬಗೆಹರಿಸಲು ನ್ಯಾಯಾಲಯವು ಮಧ್ಯಸ್ಥಿಕೆದಾರರನ್ನು ನೇಮಿಸಿತು. ಮಧ್ಯಂತರ ತಡೆಯಾಜ್ಞೆಯಲ್ಲಿ ಇಂದೋರ್ ಆಸ್ಪತ್ರೆಗೆ ನಾಲ್ಕು ವಾರಗಳಲ್ಲಿ 16.43 ಕೋಟಿ ರೂಪಾಯಿ ಪಾವಿಸುವಂತೆ ಕೋರ್ಟ್ ಆದೇಶಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪಿಎಂಒ ಹೆಸರನ್ನು ಬಳಸಿದಾಗ ಅದನ್ನು ಸಿಬಿಐಗೆ ತಿಳಿಸಲಾಯಿತು. ಈ ಬಗ್ಗೆ ಪಿಎಂಒ ಸಿಬಿಐಗೂ ದೂರು ನೀಡಿದೆ. ಮೇಲ್ನೋಟಕ್ಕೆ ಇದು ಪಿಎಂಒ ಅಧಿಕಾರಿಯ ಸೋಗು ಮತ್ತು ಪಿಎಂಒ ಹೆಸರನ್ನು ದುರುಪಯೋಗಪಡಿಸಿಕೊಂಡ ಪ್ರಕರಣವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಏಕೆಂದರೆ ಈ ವ್ಯಕ್ತಿ ಅಥವಾ ಅವರು ಉಲ್ಲೇಖಿಸಿದ ಪೋಸ್ಟ್ ಈ ಕಚೇರಿಯಲ್ಲಿಲ್ಲ. ಸದ್ಯ ಸಿಬಿಐ ತನಿಖೆ ಮುಂದುವರಿಸಿದೆ.