ನವದೆಹಲಿ: ತೌಕ್ತೆ ಚಂಡಮಾರುತದ ಬೆನ್ನಲ್ಲೇ, ದೇಶದಲ್ಲಿ ಯಾಸ್ ಅಬ್ಬರ ಜೋರಾಗಿದೆ. ಒಡಿಶಾ, ಬಂಗಾಳಕ್ಕೆ ಅಪ್ಪಳಿಸಿರುವ ಸೈಕ್ಲೋನ್ 3 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದ್ದು, ಹಲವರ ಬದುಕನ್ನು ಬೀದಿಗೆ ತಂದಿದೆ.
ಯಾಸ್ ಚಂಡಮಾರುತದ ಅಬ್ಬರಕ್ಕೆ ನಲುಗಿರುವ ಬಂಗಾಳ ಹಾಗೂ ಒಡಿಶಾಗೆ ನಾಳೆ (ಮೇ 28 ರಂದು ) ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ದೆಹಲಿಯಿಂದ ನಾಳೆ ನೇರವಾಗಿ ಒಡಿಶಾದ ಭುವನೇಶ್ವರಕ್ಕೆ ಆಗಮಿಸಲಿರುವ ಪ್ರಧಾನಿ, ಅಧಿಕಾರಿಗಳೊಂದಿಗೆ ಅವಲೋಕನ ಸಭೆ ನಡೆಸಲಿದ್ದಾರೆ. ಬಳಿಕ ಹಾನಿಗೊಳಗಾದ ಪ್ರದೇಶಗಳಾದ ಬಾಲಸೋರ್, ಭದ್ರಾಕ್ ಮತ್ತು ಪುರ್ಬಾ ಮೆದಿನಿಪುರ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಚಂಡಮಾರುತದಿಂದ ಉಂಟಾದ ನಷ್ಟದ ವಿವರಗಳನ್ನು ಪಡೆಯಲಿರುವ ಮೋದಿ, ಪರಿಹಾರ ಕಾರ್ಯಗಳ ಕುರಿತು ಮಹತ್ವದ ಸೂಚನೆಗಳನ್ನು ನೀಡುವ ಸಾಧ್ಯತೆಯಿದೆ. ಬಳಿಕ ಬಂಗಾಳಕ್ಕೆ ತೆರಳುವ ಪ್ರಧಾನಿ ಅಲ್ಲಿಯೂ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಇದನ್ನೂ ಓದಿ:ಲೇಡಿಗೋಷನ್ ಆಸ್ಪತ್ರೆಯಲ್ಲಿ 50 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಸುಸೂತ್ರ ಹೆರಿಗೆ
ಱಯಾಸ್ ಚಂಡಮಾರುತವು ಭಾರತದ ಪೂರ್ವ ಕರಾವಳಿಯ ಕೆಲ ಭಾಗಗಳಿಗೆ ಭೀಕರವಾಗಿ ಅಪ್ಪಳಿಸಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಕನಿಷ್ಠ 21 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.