ನವದೆಹಲಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.
ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪ ನಡೆದಿತ್ತು. ಈ ಸಮಿತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರು, ಪಂಜಾಬ್‌ನ ಭದ್ರತಾ ಮಹಾನಿರ್ದೇಶಕರು ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಇದರ ಸದಸ್ಯರಾಗಿರಲಿದ್ದಾರೆ.
ಈ ತನಿಖೆಯನ್ನು ಏಕಪಕ್ಷೀಯ ವಿಚಾರಣೆಗೆ ಒಳಪಡಿಸುವುದು ಸರಿಹೊಂದುವುದಿಲ್ಲ. ನಮಗೆ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ತನಿಖಾ ಸಮಿತಿಯು ತನ್ನ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುತ್ತದೆ ಎಂದು ಹೇಳಿಕೆ ನೀಡಿದೆ.
ಭದ್ರತಾ ಲೋಪವಾಗಲು ಕಾರಣವೇನು?, ಭದ್ರತಾ ಲೋಪಕ್ಕೆ ಯಾರು ಹೊಣೆಗಾರರು? ಮತ್ತು ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ? ಎಂಬುದರ ಕುರಿತು ತನಿಖಾ ಸಮಿತಿ ವರದಿ ನೀಡಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಮೊದಲು ಕೇಂದ್ರ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ರಚಿಸಿದ್ದ ತನಿಖಾ ಸಮಿತಿಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಈ ಸಂಬಂಧ ಕೇಂದ್ರ ಸರ್ಕಾರವನ್ನು ತರಾಟೆಗೂ ಕೂಡಾ ತೆಗೆದುಕೊಂಡಿತ್ತು. ಎರಡೂ ಕಡೆ ವಾದ- ಪ್ರತಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ತನ್ನದೇ ಆದ ತನಿಖಾ ಸಮಿತಿ ರಚನೆ ಮಾಡಿ ಇಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ: ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ: ಸುಪ್ರೀಂಕೋರ್ಟ್ನಿಂದ ಇಂದು ವಿಚಾರಣೆ