ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಿಗೆ ಭದ್ರತಾ ಲೋಪ ಸಾಕಷ್ಟು ವಿವಾದಕ್ಕೆ ಈಡಾಗಿದೆ. ಪ್ರತಿಭಟನಾಕಾರರ ಬಗ್ಗೆ ಗುಪ್ತಚರ ಮಾಹಿತಿ ಇದ್ದರೂ, ಪಂಜಾಬ್ ಪೊಲೀಸರು 'ಬ್ಲೂ ಬುಕ್' ನಿಯಮಗಳನ್ನು ಅನುಸರಿಸಲಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿಯವರ ರಕ್ಷಣೆಗಾಗಿ ಇರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ಸಿದ್ಧಪಡಿಸಿರುವ ಬ್ಲೂ ಬುಕ್ನಲ್ಲಿ ಕೆಲವೊಂದು ಭದ್ರತಾ ಮಾರ್ಗಸೂಚಿಗಳನ್ನು ಸಲಹೆ ನೀಡಿದ್ದು, ಈ ಸಲಹೆಯನ್ನು ಪಂಜಾಬ್ ಪೊಲೀಸರು ಪಾಲನೆ ಮಾಡಿಲ್ಲ, ಪ್ರಧಾನಿ ಕಾರಿಗೆ ಬೇರೊಂದು ಮಾರ್ಗವನ್ನು ಸಿದ್ಧಪಡಿಸಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈಗ ಸದ್ಯಕ್ಕೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಪಂಜಾಬ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿಭಟನಾಕಾರರ ಚಲನವಲನಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ವಿಐಪಿಗಳಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಪಂಜಾಬ್ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಎಸ್‌ಪಿಜಿ ಸಿಬ್ಬಂದಿ ಪ್ರಧಾನಿಗಳ ಸಮೀಪದಲ್ಲಿಯೇ ಇದ್ದರೆ, ಉಳಿದ ಭದ್ರತಾ ಕ್ರಮಗಳನ್ನು ರಾಜ್ಯ ಸರ್ಕಾರವು ನೋಡಿಕೊಳ್ಳುತ್ತದೆ. ಹಠಾತ್ ಬೆಳವಣಿಗೆಳಲ್ಲಿ ರಾಜ್ಯ ಸರ್ಕಾರ ಭದ್ರತೆಯನ್ನು ಹೆಚ್ಚು ಮಾಡುತ್ತದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
2021ರಲ್ಲಿ ಪಂಜಾಬ್ನ ಪಾಕಿಸ್ತಾನ ಗಡಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಡ್ರೋನ್ ಹಾರಾಟಗಳು ಪ್ರಕರಣಗಳು ಕಂಡುಬಂದಿವೆ. ಅನೇಕ ಡ್ರೋನ್‌ಗಳಲ್ಲಿ ಟಿಫಿನ್ ಬಾಂಬ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು, ಪಿಸ್ತೂಲ್‌ಗಳು ಮತ್ತು ಹಣದ ಕಂತೆಗಳೂ ಕೂಡಾ ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿರಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಗುಪ್ತಚರ ಇಲಾಖೆ ವರದಿ ಕೇಳಿದೆ ಎಂದು ಅಧಿಕಾರಿಗಳ ಸ್ಪಷ್ಟನೆ.
ಪ್ರಧಾನಿ ಭದ್ರತಾ ಲೋಪ ಮತ್ತು ಮತ್ತೊಂದು ವಿವಾದ
ಪ್ರಧಾನಿ ಮೋದಿಗೆ ಭದ್ರತಾ ಲೋಪ ವಿವಾದ ಒಂದೆಡೆಯಾದರೆ, ಪ್ರಧಾನಿ ಸಮಾರಂಭಕ್ಕೆ ಬಿಜೆಪಿ ಕಾರ್ಯಕರ್ತರು ತೆರಳದಂತೆ ನೋಡಿಕೊಳ್ಳಲು ಪೊಲೀಸರಿಗೆ ಅಲ್ಲಿನ ಸರ್ಕಾರವೇ ಸೂಚನೆ ನೀಡಿದೆ ಎಂದು ಪಂಜಾಬ್ನ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಸಮಾರಂಭಕ್ಕೆ ತೆರಳುತ್ತಿದ್ದ ಬಸ್ಗಳನ್ನು ಮತ್ತು ಇತರೇ ವಾಹನಗಳನ್ನು ತಡೆ ಹಿಡಿಯಲಾಯಿತು. ಸುಮಾರು 21 ಸ್ಥಳಗಳಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾಕಾರರಿಗೆ ಸರ್ಕಾರದ ಬೆಂಬಲವಿದೆ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಫಿರೋಜ್‌ಪುರ, ಕಥುನಂಗಲ್, ಕೊಟ್ಕಾಪುರ ಮತ್ತು ತಲವಂಡಿಯಲ್ಲಿ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ಸುಮಾರು 3,485 ಬಸ್‌ಗಳು ಮತ್ತು 5,000 ಇತರ ವಾಹನಗಳನ್ನು ತಡೆಯಲಾಗಿದೆ ಎಂಬುದು ಅಶ್ವನಿ ಶರ್ಮಾ ಆರೋಪಿಸಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕ ಸುಭಾಷ್ ಶರ್ಮಾ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಂಬಿಸಿ, ಪೊಲೀಸರು ಬ್ಯಾರಿಕೇಡ್ ಹಾಕಿ ಬಿಜೆಪಿ ಕಾರ್ಯಕರ್ತರನ್ನು ಸಮಾರಂಭಕ್ಕೆ ತೆರಳದಂತೆ ತಡೆದಿದ್ದಾರೆ ಎಂದಿದ್ದಾರೆ.
'ಥಳಿಸಿದರು.. ಊಟದ ಬಾಕ್ಸ್ ಕಸಿದರು..'
ಕೆಲವು ಬಸ್‌ಗಳ ಗಾಜುಗಳನ್ನು ಸಹ ಒಡೆಯಲಾಗಿದ್ದು, ಕೆಲವು ಬಿಜೆಪಿ ಕಾರ್ಯಕರ್ತರನ್ನು ಥಳಿಸಲಾಗಿದೆ ಎಂದು ಪಂಜಾಬ್ ಬಿಜೆಪಿ ನಾಯಕ ಹರ್ಜಿತ್ ಸಿಂಗ್ ಗ್ರೆವಾಲ್ ಆರೋಪಿಸಿದ್ದಾರೆ. ಮೊಗಾದ ಆಸ್ಪತ್ರೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗಾಯಗೊಂಡ ಕೆಲವು ಬಿಜೆಪಿ ಕಾರ್ಯಕರ್ತರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕಿ ಹಾಗೂ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಲಾಗಿದೆ. ಬಸ್ಗಳಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಳಿಯಿದ್ದ ಊಟದ ಬಾಕ್ಸ್ಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪ್ರಧಾನಿ ಭದ್ರತಾ ಲೋಪ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕಿಂತ, ಎಸ್‌ಪಿಜಿ, ಐಬಿ ಮತ್ತಿತರ ಏಜೆನ್ಸಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಕಾಂಗ್ರೆಸ್ ಮತ್ತು ಪಂಜಾಬ್ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಮಾಡುತ್ತಿರುವ ಟೀಕೆಗಳಿಂದ ಪ್ರಕರಣದ ಗಂಭೀರತೆ ಕಡಿಮೆಯಾಗುತ್ತದೆ ಎಂದಿದ್ದಾರೆ.
ಕೆಲವು ಬಿಜೆಪಿ ನಾಯಕರು, ಪ್ರತಿಭಟನಾಕಾರರನ್ನು ಪಂಜಾಬ್ ಪೊಲೀಸ್ ಬೆಂಬಲಿತ ಗೂಂಡಾಗಳೆಂದು ಕರೆದಿದ್ದು, ಇನ್ನೂ ಕೆಲವರು ರಾಜ್ಯ ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ ಪ್ರಧಾನಿಗೆ ಭದ್ರತಾ ಲೋಪ ಉಂಟಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 'Modi ji, How's the josh?' ಮೋದಿ ಭದ್ರತೆ ಲೋಪದ ಬಗ್ಗೆ ಕಾಂಗ್ರೆಸ್ ಮುಖಂಡನ ವಿಡಂಬನೆ