ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ತಮ್ಮ 74ನೇ ಮನ್ ಕಿ ಬಾತ್ನಲ್ಲಿ ತೆಲಂಗಾಣದ ರೈತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಂತಾಲಾ ವೆಂಕಟ ರೆಡ್ಡಿ ಅವರ ಕೃಷಿಯ ಪ್ರಯೋಗಗಳ ಕುರಿತು ಉಲ್ಲೇಖಿಸಿದ್ದಾರೆ.
ವಿಟಮಿನ್ ಡಿ ಹೇರಳವಾಗಿರುವ ವಿವಿಧ ರೀತಿಯ ಗೋಧಿ ಮತ್ತು ಭತ್ತದ ತಳಿಗಳನ್ನು ನವೀನ ಕೃಷಿ ತಂತ್ರಜ್ಞಾನ ಬಳಸಿ ರೆಡ್ಡಿಯವರು ಬೆಳೆಯುತ್ತಿದ್ದು, ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ವಿಜ್ಞಾನದ ಬಗ್ಗೆ ಮಾತನಾಡುವಾಗ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಪ್ರಯೋಗಾಲಯಗಳಿಗೆ ಸೀಮಿತಗೊಳಿಸುತ್ತೇವೆ. ಆದರೆ, ವಿಜ್ಞಾನ ಅವುಗಳನ್ನೂ ಮೀರಿದ್ದು ಎಂದು ಪ್ರಧಾನಿ ಹೇಳಿದ್ದಾರೆ.
ಮಾಸಿಕ ರೇಡಿಯೊ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರು ಹೈದರಾಬಾದ್ನ ರೈತನಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಕಳೆದ ವರ್ಷ ರೆಡ್ಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಸರ್ಕಾರಕ್ಕೆ ಹೆಮ್ಮೆಯ ವಿಷಯ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ, ವೆಂಕಟ ರೆಡ್ಡಿ ಅವರು, ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯಿಂದ ತನ್ನ ಆವಿಷ್ಕಾರಕ್ಕಾಗಿ ಪೇಟೆಂಟ್ ಪಡೆದಿದ್ದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ, ಲ್ಯಾಬ್ ಟು ಲ್ಯಾಂಡ್ಗೆ ಪ್ರಧಾನಿ ಕರೆ ನೀಡಿದ್ದರು.