ನವದೆಹಲಿ: ದ್ವಾರಕಾ ಉಪನಗರದ ಸೆಕ್ಟರ್ 10ರಲ್ಲಿರುವ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಇಂದು ಸಂಜೆ ರಾವಣ ದಹನ ಮಾಡಲಿದ್ದಾರೆ. ರಾಮಲೀಲಾ ಸಮಿತಿ ಸಂಚಾಲಕ ರಾಜೇಶ್ ಗೆಹ್ಲೋಟ್ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿಂದೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಹನ ಪ್ರಕ್ರಿಯೆ ನೆರವೇರಿಸಿದ್ದರು. ಇಂದು ಸಂಜೆ 5 ಗಂಟೆಗೆ ಪ್ರಧಾನಿ ದ್ವಾರಕಾಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ದ್ವಾರಕಾ ಸೆಕ್ಟರ್ 10ರಲ್ಲಿ ಆಯೋಜಿಸಲಾಗಿದ್ದ 11ನೇ ಬೃಹತ್ ರಾಮಲೀಲಾ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸುವ ಕುರಿತು ಊಹಾಪೋಹಗಳು ಎದ್ದಿದ್ದವು. ಆದರೆ ಕೊನೆಯವರೆಗೂ ಇದು ದೃಢಪಟ್ಟಿರಲಿಲ್ಲ. ಸೋಮವಾರ ಸಂಜೆ ಈ ಮಾಹಿತಿ ಹೊರ ಬಿದ್ದಿದೆ.
ದೆಹಲಿ ರಾಜ್ಯ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಶೌರ್ಯ ಜಾಗರಣ ಯಾತ್ರೆಯನ್ನು ಕೈಗೊಂಡಿದ್ದವು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತರು ರಾಮಲೀಲಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಮಲೀಲಾ ಮೈದಾನದಲ್ಲಿ ಸುಮಾರು 10,000 ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇದೆ. ದೂರದ ಊರುಗಳಿಂದ ರಾಮಲೀಲಾ ಮೈದಾನದಲ್ಲಿ ನಡೆಯುವ ರಾವಣ ದಹನ ಕಾರ್ಯಕ್ರಮ ನೋಡಲು ಆಗಮಿಸುತ್ತಾರೆ.
ಈ ನಡುವೆ ಪ್ರಧಾನಿ ಲಂಕಾಸುರನ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅಲ್ಲಿನ ಜನರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ರಾಮಲೀಲಾದತ್ತ ಹರಿದು ಬರುವ ಸಾಧ್ಯತೆ ಇದೆ.
ಒಂದು ತಿಂಗಳೊಳಗೆ ಇದು ಪ್ರಧಾನಿ ಎರಡನೇ ಭೇಟಿ: ಇದು ಇತ್ತೀಚಿನ ದಿನಗಳಲ್ಲಿ ರಾಮಲೀಲಾ ಮೈದಾನಕ್ಕೆ ನೀಡುತ್ತಿರುವ ಎರಡನೇ ಭೇಟಿ ಆಗಿದೆ. ಇದಕ್ಕೂ ಮುನ್ನ ಅವರು ಇಲ್ಲಿ ಬೃಹತ್ ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದ್ದರು. ಅಲ್ಲದೇ ದ್ವಾರಕಾ ಸೆಕ್ಟರ್ 23 ರಲ್ಲಿ ಹೊಸದಾಗಿ ನಿರ್ಮಿಸಲಾದ ಮೆಟ್ರೋ ನಿಲ್ದಾಣವನ್ನು ಸಹ ಉದ್ಘಾಟನೆ ಮಾಡಿದ್ದರು.
ಪ್ರಧಾನಿ ಆಗಮನದ ಘೋಷಣೆಯೊಂದಿಗೆ, ಬೆಳಗ್ಗೆಯಿಂದಲೇ ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಅನೇಕ ಮಾರ್ಗಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಪೊಲೀಸ್ ಕಾವಲು ಹೆಚ್ಚಿಸಲಾಗುತ್ತಿದೆ. ಏಕೆಂದರೆ ಎನ್‌ಎಸ್‌ಜಿ ಕಮಾಂಡೋಗಳನ್ನು ಹೊರತುಪಡಿಸಿ, ಪ್ರಧಾನಿಯವರ ಭದ್ರತೆಯಲ್ಲಿ ಎಸ್‌ಪಿಜಿ ತಂಡ ಕೂಡಾ ಇರುತ್ತದೆ.
ದೇಶದ ಜನರಿಗೆ ಶುಭಾಶಯ ಕೋರಿದ ಪ್ರಧಾನಿ: ದೇಶಾದ್ಯಂತ ಇಂದು ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ಮೋದಿ ರಾಷ್ಟ್ರದ ಜನತೆ ಹಬ್ಬದ ಶುಭ ಕಾಮನೆಗಳನ್ನು ತಿಳಿಸಿದ್ದಾರೆ.
ಇದನ್ನು ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಕೆಳಗಿಳಿಸುವುದೇ ದೇಶಭಕ್ತಿಯ ಶ್ರೇಷ್ಠ ಕಾರ್ಯ: ಕೇಜ್ರಿವಾಲ್