ಅಯೋಧ್ಯೆ (ಉತ್ತರ ಪ್ರದೇಶ): ದೀಪಾವಳಿಯ ಮುನ್ನಾ ದಿನವಾದ ಇಂದು ಅಯೋಧ್ಯೆಯಲ್ಲಿ ನಡೆಯುವ 'ದೀಪೋತ್ಸವ'ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಯ ಸುಮಾರಿಗೆ ರಾಮ ಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮೋದಿ ಸರಯೂ ಘಾಟ್‌ನಲ್ಲಿ ನಡೆಯುವ ಆರತಿಯಲ್ಲಿ ಪಾಲ್ಗೊಳ್ಳುವರು.
ಇಂದಿನಿಂದ ನಾಲ್ಕು ದಿನಗಳ ಕಾಲ ಸರಯೂ ನದಿ ತೀರದಲ್ಲಿ ನಡೆಯುವ ದೀಪೋತ್ಸವಕ್ಕೆ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರ್ಷ ಆರನೇ ಆವೃತ್ತಿಯ ದೀಪೋತ್ಸವ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ಖುದ್ದು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿಯ ದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ಅದ್ಧೂರಿ ಸಿದ್ಧತಾ ಕಾರ್ಯಗಳನ್ನು ಮಾಡಿದೆ. ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ 14.5 ಲಕ್ಷ ದೀಪಗಳನ್ನು ಬೆಳಗಿಸುವ ಗುರಿಯನ್ನು ಹೊಂದಲಾಗಿದೆ.
ಈ ಉದ್ದೇಶದಿಂದ ಅಯೋಧ್ಯೆ, ಲಖನೌ, ಗೊಂಡಾ ಮತ್ತಿತರ ಜಿಲ್ಲೆಗಳಿಂದ ಮಣ್ಣಿನ ದೀಪಗಳನ್ನು ತರಿಸಲಾಗಿದೆ. ದೀಪೋತ್ಸವವನ್ನು ಕಳೆದ ಐದು ವರ್ಷಗಳಿಗಿಂತ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಪ್ರಸ್ತುತ ವರ್ಷ 30 ನಿಮಿಷಕ್ಕೂ ಹೆಚ್ಚು ಕಾಲ ದೀಪಗಳು ಉರಿಯಲಿವೆ. ಕಳೆದ ವರ್ಷ 9 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು.
ಇದನ್ನೂ ಓದಿ: ಅ.23 ರಂದು ಅಯೋಧ್ಯೆ ದೀಪೋತ್ಸವ: ಗಿನ್ನೆಸ್ ದಾಖಲೆಗಾಗಿ ಬೆಳಗಲಿವೆ 14.50 ಲಕ್ಷ ಹಣತೆ
ಶ್ರೀರಾಮ ತನ್ನ 14 ವರ್ಷದ ವನವಾಸ ಮುಗಿಸಿ ವಾಪಾಸ್ ಬಂದ ನಂತರ ಜನರು ಇಡೀ ಅಯೋಧ್ಯೆಯನ್ನು ದೀಪಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದರು ಎಂಬ ಪ್ರತೀತಿಯಿದೆ. ಈ ಹಿನ್ನೆಲೆ ಅಯೋಧ್ಯೆಯ ದೀಪಾವಳಿ ಬಹಳ ಪ್ರಸಿದ್ಧಿ ಪಡೆದಿದೆ.
ಸರಯೂ ನದಿಯ ದಡವು ಲಕ್ಷಗಟ್ಟಲೆ ಮಣ್ಣಿನ ದೀಪಗಳಿಂದ ಬೆಳಗಲು ಕಾಯುತ್ತಿದೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದ ಪ್ರವಾಸಿ ತಾಣವನ್ನು ವೀಕ್ಷಿಸುತ್ತಾರೆ. ಬಳಿಕ ಶ್ರೀರಾಮನ 'ರಾಜ್ಯಾಭಿಷೇಕ' ವೀಕ್ಷಿಸಲು ಶ್ರೀರಾಮ ಕಥಾ ಪಾರ್ಕ್‌ನಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ನ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.