ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದಲ್ಲಿ ಕೊರೊನಾ ಪರಿಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ. ಈ ಸಂಬಂಧ ಇಂದು ನರೇಂದ್ರ ಮೋದಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಇದೇ ವೇಳೆ ಈಗಾಗಲೇ ದೇಶದಲ್ಲಿ 120 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಲಸಿಕಾಕರಣದ ಬಗ್ಗೆ ಮಾಹಿತಿ ಪಡೆಯಲಿರುವ ಪ್ರಧಾನಿ 2ನೇ ಡೋಸ್ ನೀಡಿಕೆಯನ್ನ ತೀವ್ರಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ.
ಹೊಸ ಹೊಸ ರೂಪಾಂತರಿ ವೈರಸ್ಗಳ ಹಾವಳಿ ವಿಶ್ವಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಮಿಕ್ರೋನ್ ಸೇರಿದಂತೆ ಡೆಲ್ಟಾ, ಆಲ್ಟ್ರಾ ಹಾವಳಿ ತಡೆಗಟ್ಟುವ ಬಗ್ಗೆ ಹಾಗೂ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಿದ್ದಾರೆ. ಹಾಗೂ ಇದನ್ನು ತಡೆಗಟ್ಟಲು ಅಧಿಕಾರಿಗಳಿಗೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ
ಒಮಿಕ್ರೋನ್' ಆತಂಕ ಹಿನ್ನೆಲೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣವನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ನಿರ್ಧರಿಸಿವೆ. ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್ವಾನಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ಬರುವ ಪ್ರಯಾಣಿಕರು ಯುಕೆ ಅಥವಾ ಐರಿಶ್ ಪ್ರಜೆಗಳು ಅಥವಾ ಯುಕೆ ನಿವಾಸಿಗಳ ಹೊರತು ಬೇರೆ ಯಾರೂ ಯುಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ, ಇಸ್ವಾಟಿನಿ, ಮೊಜಾಂಬಿಕ್ ಮತ್ತು ಮಲಾವಿಯಿಂದ ವಿಮಾನಗಳನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರದಿಂದಲೇ ಇದು ಜಾರಿಗೆ ಬರಲಿದೆ.