ನವದೆಹಲಿ: ವಿಶ್ವಮಟ್ಟದಲ್ಲಿ ಗಮನಾರ್ಹವಾಗಿ ಬೆಳೆಯುತ್ತಿರುವ ಭಾರತವು ಯುವಜನರಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ ದೇಶದಲ್ಲಿ ನಿರುದ್ಯೋಗ ದರವು ಕಳೆದ 6 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಾರತದ ಆರ್ಥಿಕತೆಯು ವೇಗವಾಗಿ ಪ್ರಗತಿ ಕಾಣುತ್ತಿರುವುದರಿಂದ ಹಲವು ಕ್ಷೇತ್ರಗಳಲ್ಲಿ ಯುವಜನರಿಗೆ ಅವಕಾಶಗಳು ಹೆಚ್ಚಿವೆ. ದೇಶದಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ನಿರುದ್ಯೋಗ ದರವೂ ಕೆಳಮಟ್ಟಕ್ಕೆ ಇಳಿದಿದೆ ಎಂದು ವಿವರಿಸಿದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ನಿರುದ್ಯೋಗವು ವೇಗವಾಗಿ ಕಡಿಮೆಯಾಗುತ್ತಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರಿಗೆ ಸಮಾನವಾಗಿ ತಲುಪುತ್ತಿವೆ. ಇದರ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ ಎಂದು ಪ್ರಧಾನಿ ಹೇಳಿದರು.
ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ: ದೇಶದ ಉದ್ಯೋಗಿಗಳಲ್ಲಿ ಮಹಿಳೆಯರ ದರವೂ ಗಮನಾರ್ಹವಾಗಿ ಹೆಚ್ಚಳ ಕಾಣುತ್ತಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭಿಸಲಾದ ಯೋಜನೆಗಳು ಮತ್ತು ಅಭಿಯಾನಗಳು ಪ್ರಭಾವ ಬೀರಿವೆ. ಹಿಂದಿನ ಸರ್ಕಾರಗಳಲ್ಲಿ ಕೌಶಲಾಭಿವೃದ್ಧಿ ಕುರಿತ ನಿರ್ಲಕ್ಷ್ಯದಿಂದಾಗಿ ಉದ್ಯೋಗಾವಕಾಶಗಳು ಇರಲಿಲ್ಲ. ನಮ್ಮ ಸರ್ಕಾರ ಕೌಶಲ್ಯದ ಮಹತ್ವವನ್ನು ಅರಿತು ಅದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿ, ಪ್ರತ್ಯೇಕ ಬಜೆಟ್ ನೀಡುತ್ತಿದೆ ಎಂದು ಹೇಳಿದರು.
ಕೈಗಾರಿಕೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಸಂಸ್ಥೆಗಳು ಕಾಲಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಸುಮಾರು 5 ಸಾವಿರ ಹೊಸ ಐಟಿಐಗಳನ್ನು (ಕೈಗಾರಿಕಾ ತರಬೇತಿ ಸಂಸ್ಥೆಗಳು) ಸ್ಥಾಪಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಹೊಸ ಐಟಿಐ ಸೀಟುಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಯುವಕರು ಉದ್ಯೋಗಸ್ಥರಾಗುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮಾಹಿತಿ ನೀಡಿದರು.
ಸರ್ಕಾರ ಯುವಕರ ಕೌಶಲ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಂಬಿಕೆ ಹೊಂದಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯು ಯುವಕರ ಸತ್ವವನ್ನು ಬಲಪಡಿಸಿದೆ. ಈ ಯೋಜನೆಯಡಿ, ಇದುವರೆಗೆ 1.5 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ. ಕೈಗಾರಿಕಾ ಕ್ಲಸ್ಟರ್‌ಗಳ ಬಳಿ ಹೊಸ ಕೌಶಲ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಉದ್ಯಮವು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿಸಲಿವೆ. ಇದು ಉದ್ಯೋಗಾವಕಾಶ ಸೃಷ್ಟಿಯ ಜೊತೆಗೆ, ಯುವಕರ ಕೌಶಲ್ಯವೂ ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಿ ತಿಳಿಸಿದರು.
4 ವರ್ಷಗಳಲ್ಲಿ 3ನೇ ಆರ್ಥಿಕ ರಾಷ್ಟ್ರ: ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶ ಪ್ರಕಾರ, ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಮುಂದಿನ 3-4 ವರ್ಷಗಳಲ್ಲಿ ದೇಶ, ವಿಶ್ವದ ಅಗ್ರ ಮೂರು ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದೆ. ಇದು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: 'ಇಸ್ರೇಲ್ ಕೇವಲ ಆರಂಭಿಕ ಟಾರ್ಗೆಟ್': ಹಮಾಸ್ ಕಮಾಂಡರ್ ಮಹಮೂದ್ ಅಲ್ ಜಹರ್ ಹೇಳಿಕೆ... ವಿಡಿಯೋ