ಹೈದರಾಬಾದ್ (ತೆಲಂಗಾಣ): ಮುತ್ತಿನನಗರಿ ಹೈದರಾಬಾದ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಎರಡನೇ ದಿನವೂ ಮುಂದುವರಿದಿದೆ. ಈ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಸೇರಿದಂತೆ ಅನೇಕ ಪ್ರತಿನಿಧಿಗಳಿಗೆ ತೆಲಂಗಾಣದ ಖಾದ್ಯಗಳನ್ನು ಉಣಬಡಿಸಲಾಗುತ್ತಿದೆ. ಈ ಖಾದ್ಯಗಳನ್ನು ಖುದ್ದು ಪ್ರಧಾನಿ ಮೋದಿ ಪರಿಶೀಲಿಸಿ ರುಚಿಯನ್ನು ಸವಿದರು.
ಕರೀಂನಗರ ಜಿಲ್ಲೆಯ ಗುಳ್ಳ ಯಾದಮ್ಮ ನೇತೃತ್ವದ ಪಾಕ ಪ್ರವೀಣರು ತೆಲಂಗಾಣ ಖಾದ್ಯಗಳನ್ನು ತಯಾರಿಸಿದ್ದಾರೆ. ಪ್ರಧಾನಿ ಮೋದಿ ಈ ಆಹಾರದ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದು, ಶನಿವಾರದಿಂದ ಇಲ್ಲಿಯವೆರೆಗೆ ಮೂರು ಬಾರಿ ಡೈನಿಂಗ್ ಹಾಲ್‌ಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅವರು ಕೆಲವು ಭಕ್ಷ್ಯಗಳ ರುಚಿ ಸವಿದರು. ಅಲ್ಲದೇ, ತೆಲಂಗಾಣದ ಖಾದ್ಯಗಳ ಬಗ್ಗೆ ಕೇಳಿ ಪ್ರಧಾನಿ ಮಾಹಿತಿ ಪಡೆದರು. ಆಗ ಸ್ಥಳದಲ್ಲಿದ್ದ ಸ್ಥಳೀಯ ಪ್ರತಿನಿಧಿಗಳು ಖಾದ್ಯಗಳ ಕುರಿತು ವಿವರಿಸಿದರು.
![ಖಾದ್ಯಗಳನ್ನು ಖುದ್ದಾಗಿ ಪರಿಶೀಲಿಸಿ ರುಚಿ ನೋಡಿದ ಪ್ರಧಾನಿ ಮೋದಿ](https://etvbharatimages.akamaized.net/etvbharat/prod-images/15726194_thumb666.jpg)
ಸಂತಸ ಹಂಚಿಕೊಂಡ ಯಾದಮ್ಮ: ಪ್ರಧಾನಿ ಮೋದಿ ಸೇರಿ ಅನೇಕ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಕ್ಷದ ದಿಗ್ಗಜರಿಗೆ ತಮ್ಮ ಕೈಯಿಂದಲೇ ಅಡುಗೆ ಮಾಡಿ ಬಡಿಸುವ ಅವಕಾಶ ಸಿಕ್ಕಿದ್ದಕ್ಕೆ ಬಾಣಿಸಿಗರಾದ ಯಾದಮ್ಮ ಸಂತಸ ವ್ಯಕ್ತಪಡಿಸಿದರು. ಅಡುಗೆ ಮಾಡುವ ಅವಕಾಶ ಕಲ್ಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ ಅವರಿಗೆ ಋಣಿ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ ಅಡುಗೆ ಮಾಡಲು ಬರುವಾಗ ಶನಿವಾರ ತಮ್ಮನ್ನು ತಡೆಯಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುತ್ತಿದ್ದಾರೆ ಎಂದು ಯಾದಮ್ಮ ತಿಳಿಸಿದರು. ನಮಗೆ ಯಾರೂ ತಡೆಯಲಿಲ್ಲ. ಆತ್ಮೀಯವಾಗಿ ಅಡುಗೆ ಮಾಡಲು ಸ್ಥಳಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಬಿಜೆಪಿ ರಣತಂತ್ರ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ