ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ (ಮೇ. 19) ನಾಳೆಯಿಂದ ಮೇ.24ರ ವರೆಗೆ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಜಪಾನ್, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾಕ್ಕೆ ಆರು ದಿನಗಳ ಪ್ರವಾಸ ಮಾಡಲಿದ್ದು, ಈ ವೇಳೆ ಹಿರೋಷಿಮಾದಲ್ಲಿ ನಡೆಯಲಿರುವ G7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಪ್ರಧಾನಮಂತ್ರಿ ಮೊದಲು ಮೇ 19 ರಿಂದ 21 ರವರೆಗೆ ಜಪಾನ್‌ನ ಹಿರೋಷಿಮಾಕ್ಕೆ ಭೇಟಿ ನೀಡಲಿದ್ದಾರೆ. ಜಪಾನ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ 7 ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಮೋದಿ ಜಪಾನ್‌ಗೆ ಭೇಟಿ ನೀಡುತ್ತಿದ್ದು, ಜಿ 7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪಪುವಾ ನ್ಯೂಗಿನಿ ದೇಶಕ್ಕೆ ತೆರಳಲಿದ್ದಾರೆ. ಇದು ಪಪುವಾ ನ್ಯೂಗಿನಿಗೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದ್ದು, ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಮೂರನೇ ಶೃಂಗಸಭೆಯ ಸಹ-ಅಧ್ಯಕ್ಷರಾಗಿರುತ್ತಾರೆ. ಪ್ರವಾಸದ ಮೂರನೇ ಹಂತವಾಗಿ ಮೋದಿಯವರು ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿದ್ದು, ಅಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದೆ.
ಹಿರೋಷಿಮಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಶಾಂತಿ, ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿ, ಸಮೃದ್ಧಿಯಂತಹ ವಿಷಯಗಳ ಕುರಿತು ಪಾಲುದಾರ ರಾಷ್ಟ್ರಗಳೊಂದಿಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ ಆಹಾರ, ರಸಗೊಬ್ಬರ, ಭದ್ರತೆ, ಆರೋಗ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಹಕಾರ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಶೃಂಗಸಭೆಯ ಜೊತೆಗೆ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ಸಹ ನಡೆಸಲಿದ್ದಾರೆ ಎಂದು ವರದಿಗಳು ಮಾಹಿತಿ ನೀಡಿವೆ.
ಇತ್ತೀಚಿನ ವರ್ಷಗಳಲ್ಲಿ ಜಪಾನ್ ಮತ್ತು ಭಾರತದ ನಡುವಿನ ಆರ್ಥಿಕ ಸಂಬಂಧವು ಸ್ಥಿರವಾಗಿ ವಿಸ್ತರಿಸುತ್ತಿದೆ. ಉಭಯ ದೇಶಗಳ ನಡುವಿನ ವ್ಯಾಪಾರದ ಪ್ರಮಾಣ ಹೆಚ್ಚಾಗಿದೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಕಳೆದ ಮಾರ್ಚ್ 20 ರಂದು ಭಾರತಕ್ಕೆ ಭೇಟಿ ನೀಡಿದ್ದರು. ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಬಲಪಡಿಸುವ ಜವಾಬ್ದಾರಿಯನ್ನು ಎರಡೂ ದೇಶಗಳು ಹಂಚಿಕೊಳ್ಳುತ್ತವೆ ಎಂದು ಉಭಯ ನಾಯಕರು ದೃಢಪಡಿಸಿದ್ದರು. ಈ ವಿಚಾರವನ್ನು G7 ಮತ್ತು G20 ಸಭೆಗಳಲ್ಲಿ ಸ್ಪಷ್ಟವಾಗಿ ವಿವರಿಸುವುದಾಗಿ ಒಪ್ಪಿಕೊಂಡರು.
ಇದನ್ನೂ ಓದಿ : ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?
ಇನ್ನು ಮೇ 23 ರಂದು ಸಿಡ್ನಿಯಲ್ಲಿ ಹಮ್ಮಿಕೊಂಡಿರುವ ಸಮುದಾಯದ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಮೇ 24 ರಂದು ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದು, ಆಸ್ಟ್ರೇಲಿಯಾದ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು, ಭಾರತ ಮತ್ತು ಆಸ್ಟ್ರೇಲಿಯಾವು ಶಿಕ್ಷಣ, ಸಂಸ್ಕೃತಿ, ರಕ್ಷಣೆ ಮತ್ತು ವ್ಯಾಪಾರದಲ್ಲಿ ಆಳವಾದ ಸಂಪರ್ಕ ಹೊಂದಿವೆ ಎಂದು ಹೇಳಿದ್ದರು.