ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 1 ಗಂಟೆಗೆ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಗ್ರಾಮಗಳ ಸಮೀಪದಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ಸ್ಥಾಪಿಸುವುದು ಪ್ರಧಾನಿಮಂತ್ರಿಗಳ ಆದ್ಯತೆಯಾಗಿದೆ. ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯು ಇದೇ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.
ಈ ಕ್ರೀಡಾ ವಿಶ್ವವಿದ್ಯಾನಿಲಯವು ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ ಸೇರಿದಂತೆ ಅನೇಕ ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಲಿದೆ.
ಇಷ್ಟೇ ಅಲ್ಲದೇ, ಶೂಟಿಂಗ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಆರ್ಚರಿ, ಕಯಾಕಿಂಗ್‌ಗೆ ಸೌಲಭ್ಯಗಳನ್ನೂ ಹೊಂದಿದ್ದು, 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯ ವಿಶ್ವವಿದ್ಯಾಲಯಕ್ಕಿದೆ.
ಇದನ್ನೂ ಓದಿ: Vaishno Devi Stampede: ತನಿಖೆಗೆ ತ್ರಿಸದಸ್ಯ ಸಮಿತಿ ರಚನೆ, ವಾರದೊಳಗೆ ವರದಿ ನೀಡಲು ಸೂಚನೆ