ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ತೀವ್ರತೆ ಈಗಾಗಲೇ ಕೈ ಮೀರಿ ಹೋಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವ ಉದ್ದೇಶದಿಂದ ಪ್ರಧಾನಿ ಮೋದಿ ಮಹತ್ವದ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭೆ ಆಯೋಜನೆಗೊಂಡಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ಇದರಲ್ಲಿ ಭಾಗಿಯಾಗಲಿದ್ದಾರೆ.
ಭೂಸೇನಾ ಮುಖ್ಯಸ್ಥ ಎಂಎಂ ನರವಣೆ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಕೋವಿಡ್ ನಿರ್ಮೂಲನೆ ಮಾಡಲು ಸೇನೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಕ್ಯಾಬಿನೆಟ್ ಸಭೆ ಕರೆದಿದ್ದಾರೆ.
ಇದನ್ನೂ ಓದಿ: ಆಮ್ಲಜನಕ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕ ಸಿಲಿಂಡರ್ ಮಾರುತ್ತಿದ್ದವರ ಬಂಧನ
ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಇದೇ ವೇಳೆ ಸಚಿವರಿಂದ ಕೋವಿಡ್ ನಿಯಂತ್ರಣದ ಕಾರ್ಯತಂತ್ರದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ನಿತ್ಯ 3 ಲಕ್ಷಕ್ಕೂ ಅಧಿಕ ಸೋಂಕಿತ ಕೇಸ್ ಕಂಡು ಬರುತ್ತಿರುವುದು ಕೇಂದ್ರ ಸರ್ಕಾರದ ನಿದ್ದೆ ಗೆಡಿಸಿದೆ.