ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ನಾಯಕರೊಂದಿಗೆ ಸೋಮವಾರ ಮಾತುಕತೆ ನಡೆಸಿದರು. ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದ ಪ್ರಧಾನಿ, ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೂ ಸಮಾಲೋಚನೆ ನಡೆಸಿದರು.
ರಷ್ಯಾ ಹಾಗೂ ಉಕ್ರೇನ್ ಯುದ್ಧ ಆರಂಭವಾಗಿ 12 ದಿನಗಳು ಕಳೆದಿದ್ದು, ಎರಡನೇ ಬಾರಿಗೆ ಪ್ರಧಾನಿ ಮೋದಿ ಎರಡೂ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಜತೆಗೆ ಸುಮಾರು 50 ನಿಮಿಷಗಳ ಕಾಲ ದೂರವಾಣಿಯಲ್ಲಿ ಮೋದಿ ಮಾತನಾಡಿ, ಉಕ್ರೇನ್ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಈ ವೇಳೆ ಉಕ್ರೇನ್ನೊಂದಿಗೆ ನಡೆಯುತ್ತಿರುವ ಸಂಧಾನದ ಮಾತುಕತೆ ಬಗ್ಗೆ ಪ್ರಧಾನಿಗೆ ರಷ್ಯಾ ಅಧ್ಯಕ್ಷರು ವಿವರಿಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಅಲ್ಲದೇ, ಉಕ್ರೇನ್ನ ತಂಡಗಳೊಂದಿಗೆ ನಡೆಯುತ್ತಿರುವ ಮಾತುಕತೆ ಜತೆಗೆ ನೇರವಾಗಿಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸುವಂತೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನಿ ಒತ್ತಾಯಿಸಿದರು. ಇದಲ್ಲದೇ, ಸುಮಿ ಸೇರಿ ಉಕ್ರೇನ್ ಇತರ ಭಾಗಗಳಲ್ಲಿ ಕದನ ವಿರಾಮ ಘೋಷಣೆ ಮತ್ತು ಮೂಲಸೌಕರ್ಯಗಳ ಕಲ್ಪಿಸಲು ಅನುವು ಮಾಡಿಕೊಟ್ಟಿರುವುದಕ್ಕೆ ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದರು.
ಭಾರತೀಯರ ಸ್ಥಳಾಂತರಕ್ಕೆ ಸಹಕಾರ: ಯುದ್ಧ ಪೀಡಿತ ಉಕ್ರೇನ್ನ ಸುಮಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಮತ್ತು ಸ್ಥಳಾಂತರ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಇದಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಸುರಕ್ಷಿತವಾಗಿ ಭಾರತೀಯರ ಸ್ಥಳಾಂತರಕ್ಕೆ ಅಗತ್ಯವಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
ಇನ್ನು, ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಧಾನಿ ಮೋದಿ 35 ನಿಮಿಷಗಳ ಕಾಲ ಮತುಕತೆ ನಡೆಸಿದ್ದರು. ಈ ವೇಳೆ ಕೂಡ ಸುಮಿಯಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಸಹಕಾರ ನೀಡುವಂತೆ ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮನವಿ ಮಾಡಿದ್ದರು.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು: 35 ನಿಮಿಷ ಸಮಾಲೋಚನೆ