ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೂರವಾಣಿ ಮೂಲಕ ಮಾತನಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಇದೇ ವೇಳೆ, ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರಕ್ಕೆ ಸಹಾಯ ಮಾಡಿದ್ದ ಬಗ್ಗೆ ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಧನ್ಯವಾದಗಳನ್ನೂ ಹೇಳಿದರು.
ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ 12 ದಿನಗಳು ಆಗಿದೆ. ಯುದ್ಧ ಆರಂಭವಾದ ಬಳಿಕ ಈ ಹಿಂದೆ ಒಮ್ಮೆ ಪ್ರಧಾನಿ ಮೋದಿ ಮಾತನಾಡಿದ್ದರು. ಇಂದು ಎರಡನೇ ಬಾರಿಗೆ ದೂರವಾಣಿ ಮೂಲಕ ಉಕ್ರೇನ್ ಅಧ್ಯಕ್ಷರಿಗೆ ಕರೆ ಮಾತನಾಡಿದ್ದು, ಉಭಯ ನಾಯಕರು ಸುಮಾರು 35 ನಿಮಿಷಗಳ ಕಾಲ ಮತುಕತೆ ನಡೆಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಇಂದು ಪ್ರಧಾನಿ ಮೋದಿ ಮಾತುಕತೆ
ತಮ್ಮ ಮಾತುಕತೆಯಲ್ಲಿ ಇದುವರೆಗೆ ಉಕ್ರೇನ್ನಿಂದ ಭಾರತೀಯರ ಸ್ಥಳಾಂತರಕ್ಕೆ ನೆರವು ಮಾಡಿದ್ದಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮಾಡಿ, ಅಲ್ಲಿ ಇನ್ನೂ ಸಿಲುಕಿರುವ ಭಾರತದ ಪ್ರಜೆಗಳನ್ನು ಕರೆತರಲು ಮುಂದೆ ಕೂಡ ಸಹಾಯ ಮಾಡಬೇಕೆಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಕೋರಿದರು.
ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ ಉಕ್ರೇನ್ - ರಷ್ಯಾ ಯುದ್ಧ
ಅಲ್ಲದೇ, ಯುದ್ಧ ಬಗ್ಗೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಧಾನದ ಮಾತುಕತೆ ಬಗ್ಗೆಯೂ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಇನ್ನು, ಇವತ್ತೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೂ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.