ನವದೆಹಲಿ: ಮೂರು ದಿನಗಳ ಭಾರತ ಪ್ರವಾಸಕ್ಕೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್‌ಸೆನ್ ಆಗಮಿಸಿದ್ದು, ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಅವರು ಮೆಟ್ಟೆ ಫ್ರೆಡರಿಕ್‌ಸೆನ್ ಅವರಿಗೆ ಸ್ವಾಗತ ಕೋರಿದ್ದಾರೆ.
ಕಳೆದ ಮಾರ್ಚ್‌ನಿಂದ ಕೋವಿಡ್ ಮಾರ್ಗಸೂಚಿಗಳು ಜಾರಿಯಾದ ನಂತರ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯಸ್ಥರೊಬ್ಬರು, ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಫ್ರೆಡೆರಿಕ್‌ಸೆನ್ ಅವರನ್ನು ಬರಮಾಡಿಕೊಂಡಿದ್ದಾರೆ.
ಭಾರತ ಭೇಟಿಯ ಸಂದರ್ಭದಲ್ಲಿ ಫ್ರೆಡರಿಕ್‌ಸೆನ್ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರ ಜೊತೆಗೆ ಕೆಲವೊಂದು ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತಕ್ಕೆ ಮೆಟ್ಟೆ ಫ್ರೆಡರಿಕ್‌ಸೆನ್‌ರ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಈ ವರ್ಷದ ಆರಂಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಡೆನ್ಮಾರ್ಕ್ಗೆ ಭೇಟಿ ನೀಡಿ, ಕೆಲವೊಂದು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದರು.
ಭಾರತ ಮತ್ತು ಡೆನ್ಮಾರ್ಕ್ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಿವೆ. 200ಕ್ಕೂ ಹೆಚ್ಚು ಡೆನ್ಮಾರ್ಕ್ ಕಂಪನಿಗಳು ಭಾರತದಲ್ಲಿವೆ ಮತ್ತು 60ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿವೆ.
'ನಿಕಟ ಪಾಲುದಾರ ಎಂದು ಪರಿಗಣಿಸುತ್ತೇವೆ'
ಭಾರತಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಮೆಟ್ಟೆ ಫ್ರೆಡರಿಕ್‌ಸೆನ್, ನಾವು ಭಾರತವನ್ನು ಒಂದು ನಿಕಟ ಪಾಲುದಾರ ಎಂದು ಪರಿಗಣಿಸುತ್ತೇವೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಮೈಲಿಗಲ್ಲು ಎಂದು ನಾನು ಭಾವಿಸುತ್ತೇವೆ ಎಂದು ರಾಷ್ಟ್ರಪತಿ ಭವನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸರ್ವರ್ ಡೌನ್ಗೆ ಕ್ಷಮೆಯಾಚಿದ ಫೇಸ್ಬುಕ್: ಸಮಸ್ಯೆ ಪರಿಹರಿಸಿರುವುದಾಗಿ ಸ್ಪಷ್ಟನೆ