ಅಹಮದಾಬಾದ್ : ತೌಕ್ತೆ ಚಂಡಮಾರುತ ಅಪ್ಪಳಿಸಿದ ಬಳಿಕ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಭಾವನಗರಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ಕೈಗೊಂಡರು.
ವೈಮಾನಿಕ ಸಮೀಕ್ಷೆಯ ಬಳಿಕ ಅವರು ಪ್ರವಾಹ ಪೀಡಿತರ ನೆರವಿಗಾಗಿ 1 ಸಾವಿರ ಕೋಟಿ ರೂ. ತಾತ್ಕಾಲಿಕ ಅನುದಾನ ಘೋಷಣೆ ಮಾಡಿದ್ದಾರೆ.
ಮೋದಿ ದೆಹಲಿಯಿಂದ ಭಾವನಗರಕ್ಕೆ ಬಂದಿಳಿದ ಪ್ರಧಾನಿ ಉನಾ, ದಿಯು, ಜಫರಾಬಾದ್ ಮತ್ತು ಮಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೀಕ್ಷೆಯ ನಂತರ ಪ್ರಧಾನಿ ಅಹಮದಾಬಾದ್‌ನಲ್ಲಿ ಪರಿಶೀಲನಾ ಸಭೆ ಸಹ ನಡೆಸಿದರು.
ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾವಿರ ಕೋಟಿ ರೂ. ಪರಿಹಾರದ ಅನುದಾನ ಘೋಷಣೆ ಮಾಡಿದ್ದಾರೆ.
ತೌಕ್ತೆ ಚಂಡಮಾರುತವು ರಾಜ್ಯದ ಕೆಲವು ಭಾಗಗಳಲ್ಲಿ ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ. ಅಷ್ಟೇ ಅಲ್ಲದೆ, ಗುಜರಾತ್‌ನಲ್ಲಿ 13 ಜನರು ಸಾವನ್ನಪ್ಪಿದ್ದಾರೆ.
ರಾಜ್ಯವು ಎದುರಿಸಿದ ಭೀಕರ ಚಂಡಮಾರುತಗಳಲ್ಲಿ ತೌಕ್ತೆ ಚಂಡಮಾರುತವೂ ಒಂದು. 46 ತಾಲೂಕುಗಳಲ್ಲಿ 100 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದಿದೆ.
ಸೋಮವಾರ ಅತ್ಯಂತ ತೀವ್ರವಾದ ಚಂಡಮಾರುತದ ಎಂದು ಗುರುತಿಸಲ್ಪಟ್ಟ ತೌಕ್ತೆ ಅಲ್ಲಿನ ಜನರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿತ್ತು.
ಗುಜರಾತ್‌ನಲ್ಲಿ ಉಂಟಾದ ಚಂಡಮಾರುತದಿಂದಾಗಿ 16,000ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. 40,000ಕ್ಕೂ ಹೆಚ್ಚು ಮರಗಳು ಮತ್ತು 70,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದರು.