ವಾಷಿಂಗ್ಟನ್ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೆಚ್-1ಬಿ(H-1B) ವೀಸಾ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸಮಸ್ಯೆಗಳ ಕುರಿತಂತೆ ಅಧ್ಯಕ್ಷ ಜೋ ಬೈಡನ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ತಿಳಿಸಿದ್ದಾರೆ.
ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಅವರು ಶುಕ್ರವಾರ ಯುಎಸ್ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ಕ್ವಾಡ್ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದರು. ಭೇಟಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿದೆ.
ಉದ್ಯೋಗ ಅರಸಿ ಭಾರತದಿಂದ ಅಮೆರಿಕಕ್ಕೆ ತೆರಳಲು ಅಗತ್ಯವಾಗಿರುವ ಹೆಚ್-1ಬಿ ವೀಸಾ ಕುರಿತು ಮೋದಿ ಪ್ರಸ್ತಾಪಿಸಿದ್ದಾರೆ. ಯುಎಸ್ ಕಂಪನಿಗಳಿಗೆ ಅಗತ್ಯವಿರುವ ಪರಿಣಿತ ಉದ್ಯೋಗಿಗಳು ಅಮೆರಿಕಕ್ಕೆ ತೆರಳಬೇಕಾದರೆ ವಲಸೆರಹಿತ ವೀಸಾದ ಅಗತ್ಯವಿದೆ. ಇಂತಹ ಕೆಲಸಗಳಿಗಾಗಿ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳಿಂದ ಲಕ್ಷಕ್ಕೂ ಅಧಿಕ ಮಂದಿ ಅಮೆರಿಕಕ್ಕೆ ತೆರಳುತ್ತಾರೆ. ಆದರೆ ಇವರೆಲ್ಲರಿಗೂ ಹೆಚ್-1ಬಿ ವೀಸಾ ಅಗತ್ಯವಿದ್ದು, ಅಮೆರಿಕ ಇತ್ತೀಚೆಗೆ ಹೆಚ್-1ಬಿ ವೀಸಾ ನೀಡುವುದರಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ಕುರಿತು ಮೋದಿ ಬೈಡನ್ ಜತೆ ಚರ್ಚಿಸಿದ್ದಾರೆ ಎಂದು ಶೃಂಗ್ಲಾ ಶುಕ್ರವಾರ ತಿಳಿಸಿದ್ದಾರೆ.
ಶ್ವೇತಭವನ ಈ ಹಿಂದೆ ಹೊರಡಿಸಿದ ಪತ್ರದಲ್ಲಿ 2021ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ದಾಖಲೆಯ 62,000 ವೀಸಾಗಳನ್ನು ನೀಡಿರುವುದಕ್ಕೆ ಅಮೆರಿಕವು ಹೆಮ್ಮೆಪಡುತ್ತದೆ ಎಂದು ತಿಳಿಸಿತ್ತು. ಅಮೆರಿಕದಲ್ಲಿ ಸುಮಾರು 2,00,000 ಭಾರತೀಯ ವಿದ್ಯಾರ್ಥಿಗಳು ಯುಎಸ್ ಆರ್ಥಿಕತೆಗೆ ವಾರ್ಷಿಕವಾಗಿ 7.7 ಬಿಲಿಯನ್ ಡಾಲರ್ ಕೊಡುಗೆ ನೀಡುತ್ತಾರೆ.
ವಾರ್ಷಿಕವಾಗಿ 65,000 ಹೆಚ್-1 ಬಿ ವೀಸಾಗಳಿಗೆ ಅಮೆರಿಕ ಮಿತಿ ಹಾಕಿಕೊಂಡಿದ್ದು, ಅಮೆರಿಕದಲ್ಲೇ ಉನ್ನತ ಪದವಿಯನ್ನು ಪಡೆದ ವಿದೇಶಿಗರಿಗಾಗಿ ಹೆಚ್ಚುವರಿ 20,000 ಹೆಚ್-1 ಬಿ ವೀಸಾಗಳನ್ನು ಮೀಸಲಿಟ್ಟಿದೆ. ಜೊತೆಗೆ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಈ ವೀಸಾ ಮೇಲೆ ಹಲವು ನಿರ್ಬಂಧ ವಿಧಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಕೋರ್ಟ್ ಆವರಣದಲ್ಲಿನ ಶೂಟೌಟ್ ಬಗ್ಗೆ ಸಿಜೆಐ ಎನ್.ವಿ. ರಮಣ ತೀವ್ರ ಕಳವಳ