ಸಿಡ್ನಿ (ಆಸ್ಟ್ರೇಲಿಯಾ): ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆ ದೇಶದಲ್ಲಿ ಮಿಂಚು ಹರಿಸುತ್ತಿದ್ದು, ಇದೇ ವೇಳೆ ಅಲ್ಲಿನ ಹಿಂದು ದೇವಾಲಯಗಳ ಮೇಲೆ ಆಗುತ್ತಿರುವ ದಾಳಿಯನ್ನು ಖಂಡಿಸಿದರು. ಈ ಬಗ್ಗೆ ಪ್ರಧಾನಿ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರ ಜೊತೆಗೆ ಚರ್ಚಿಸಿದ್ದು, ಆಕ್ರಮಣಕಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೋದಿ ಹೇಳಿದರು.
ಸಿಡ್ನಿಯಲ್ಲಿ 20 ಸಾವಿರಕ್ಕೂ ಅಧಿಕ ಜನರನ್ನುದ್ದೇಶಿಸಿದ ಮಾತನಾಡಿದ ಮೋದಿ, ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿ ಮತ್ತು ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಈ ಅತಿರೇಕವನ್ನು ತಡೆಯುವ ಮೂಲಕ ಉಭಯ ರಾಷ್ಟ್ರಗಳ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ದೇವಾಲಯಗಳ ಮೇಲಿನ ದಾಳಿಯನ್ನು ಎಂದಿಗೂ ಒಪ್ಪಲಾಗದು. ಭಾರತ -ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಮತ್ತು ಆತ್ಮೀಯ ಸಂಬಂಧವನ್ನು ಇಂತಹ ನಡೆಗಳಿಂದ ಹಾನಿ ಮಾಡುವ ಯಾವುದೇ ತಂತ್ರಗಳು ಫಲಿಸವು. ಇಂತಹ ದಾಳಿಗಳ ವಿರುದ್ಧ ಭವಿಷ್ಯದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಲ್ಬನೀಸ್ ಅವರು ಭರವಸೆ ನೀಡಿದ್ದಾರೆ ಎಂದು ಮೋದಿ ತಿಳಿಸಿದರು. ಆಸೀಸ್ ಪ್ರಧಾನಿ ಅಲ್ಬನೀಸ್ ಅವರು ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಧಾರ್ಮಿಕ ಕಟ್ಟಡಗಳ ಮೇಲೆ ನಡೆದ ದಾಳಿಗಳನ್ನು ದೇಶ ಸಹಿಸುವುದಿಲ್ಲ ಮತ್ತು ಹಿಂದೂ ದೇವಾಲಯಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು.
ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಮಾತನಾಡಿ, ನಮ್ಮದು ಜನರ ನಂಬಿಕೆಯನ್ನು ಗೌರವಿಸುವ ದೇಶವಾಗಿದೆ. ಹಿಂದೂ ದೇವಾಲಯಗಳು, ಮಸೀದಿಗಳು, ಚರ್ಚ್ಗಳು ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳ ಮೇಲೆ ನಡೆಯುವ ದಾಳೀಯನ್ನು ದೇಶ ಸಹಿಸುವುದಿಲ್ಲ ಎಂದರು. ನಮ್ಮ ದೇಶ ಸಹಿಷ್ಣು ಬಹುಸಂಸ್ಕೃತಿಯ ರಾಷ್ಟ್ರವಾಗಿದೆ. ಅಂತಹ ಘಟನೆಗಳು ನಡೆದಲ್ಲಿ ಅವರ ವಿರುದ್ಧ ನಮ್ಮ ಪೋಲಿಸ್ ಮತ್ತು ಭದ್ರತಾ ಏಜೆನ್ಸಿಗಳು ಕಠಿಣ ಕ್ರಮ ತೆಗೆದುಕೊಳ್ಳುತ್ತವೆ. ಇದಕ್ಕೆ ಕಾರಣವಾದವರು ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಲಿದ್ದಾರೆ. ಸಹಿಷ್ಣು ದೇಶದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಅವರು ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸಿದರು.
ದೇವಾಲಯಗಳ ಮೇಲೆ ದಾಳಿ ಪ್ರಕರಣಗಳು: ಪ್ರಮುಖವಾಗಿ ಆಸೀಸ್ನಲ್ಲಿ ಖಲಿಸ್ತಾನಿ ಉಗ್ರವಾದದ ಹಲವಾರು ಪ್ರಕರಣಗಳು ದಾಖಲಾಗಿವೆ. ಖಲಿಸ್ತಾನಿ ಕಾರ್ಯಕರ್ತರು ಮತ್ತು ಭಾರತದ ಪರ ಪ್ರತಿಭಟನಾಕಾರರ ನಡುವಿನ ಜಗಳಗಳು ಇತ್ತೀಚೆಗೆ ಹೆಚ್ಚಾಗಿ ಮುಂಚೂಣಿಗೆ ಬಂದಿವೆ. ಪಂಜಾಬ್ನಲ್ಲಿ ಖಲಿಸ್ಥಾನಿ ಹೋರಾಟಗಾರ ಅಮೃತ್ಪಾಲ್ ಸಿಂಗ್ರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆಸ್ಟ್ರೇಲಿಯಾದಲ್ಲಿ ಉಪಟಳ ತೋರಿದ ಖಲಿಸ್ತಾನಿಗಳು ಭಾರತದ ಧ್ವಜಗಳನ್ನು ಸುಟ್ಟು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದರು.
ಈ ವರ್ಷದ ಮಾರ್ಚ್‌ನಲ್ಲಿ ಬ್ರಿಸ್ಬೇನ್‌ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಧ್ವಂಸ, ಜನವರಿ 16 ರಂದು ಕ್ಯಾರಮ್ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಹಿಂದೂ ವಿರೋಧಿ ಬರಹ ಗೀಚಿ ಧ್ವಂಸ, ಜನವರಿ 12 ರಂದು ಮಿಲ್ ಪಾರ್ಕ್‌ನಲ್ಲಿರುವ ಬಿಎಪಿಎಸ್ ಸ್ವಾಮಿ ನಾರಾಯಣ ಮಂದಿರದಲ್ಲಿ ಭಾರತ ಮತ್ತು ಹಿಂದೂ ವಿರೋಧಿ ಬರಹ ಗೀಚಲಾಗಿತ್ತು.
ಇದನ್ನೂ ಓದಿ: 'ನಾನೇ ಕ್ಷೇತ್ರಕ್ಕೆ ಬರುತ್ತೇನೆ, ಬೆಂಗಳೂರಿಗೆ ಬರಬೇಡಿ': ಕನಕಪುರ ಕ್ಷೇತ್ರದ ಅಭಿಮಾನಿಗಳಿಗೆ ಡಿಕೆಶಿ ಮನವಿ