ನವದೆಹಲಿ: 'ಮೇಕ್ ಇನ್ ಇಂಡಿಯಾ' ಯೋಜನೆಯು ಈಗಿನ ಅಗತ್ಯ ಮಾತ್ರವಲ್ಲ, ಜಗತ್ತಿಗೆ ನಮ್ಮ ದೇಶದ ಉತ್ಪಾದನಾ ಶಕ್ತಿಯನ್ನು ತೋರಿಸಲು ಇರುವ ಒಂದು ಅವಕಾಶವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದು, ದೇಶದಲ್ಲಿ ಸುಸ್ಥಿರ ಅಭಿವದ್ಧಿಗೆ ಮತ್ತು ಉತ್ಪಾದನೆಯ ಹೆಚ್ಚಳಕ್ಕೆ ಕರೆ ನೀಡಿದ್ದಾರೆ.
ಬಜೆಟ್ನ ನಂತರದಲ್ಲಿ 'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' ಕುರಿತು ವೆಬಿನಾರ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಕ್ಕಾಗಿ ಮೇಕ್ ಇನ್ ಇಂಡಿಯಾದ ಕಡೆಗೆ ನಾವು ಗಮನಹರಿಸಬೇಕಿದೆ. ಸುಸ್ಥಿರ ಮತ್ತು ಉತ್ಪಾದನೆ ಹೆಚ್ಚಳದ ಅಗತ್ಯವಿದೆ. ಸೆಮಿಕಂಡಕ್ಟರ್ಗಳ ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಬೇಕು ಎಂದರು.
ಭಾರತವನ್ನು ಸ್ವಾವಲಂಬಿ ರಾಷ್ಟ್ರ ಮಾಡುವುದು ಮಾತ್ರವಲ್ಲದೇ, ಜಗತ್ತಿಗೆ ಮಾರುಕಟ್ಟೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಇದು ಮಾನವ ಸಂಪನ್ಮೂಲ ಮತ್ತು ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ಪ್ರಯತ್ನವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ನಮ್ಮನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಪರವಾನಗಿ ಶುಲ್ಕ, ಹಾನಿ ಮರುಪಾವತಿ ಕೋರಿ ಸಲ್ಲಿಸಿದ್ದ ಲೂಪ್ ಟೆಲಿಕಾಂನ ಅರ್ಜಿ ವಜಾಗೊಳಿಸಿದ ಸುಪ್ರೀಂ
ಮೇಕ್ ಇನ್ ಇಂಡಿಯಾ ಸಾಕಷ್ಟು ಅವಕಾಶಗಳನ್ನು ತರುತ್ತದೆ. ಭಾರತವನ್ನು ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದು, ದೇಶದಲ್ಲಿ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳು ಹೆಚ್ಚಿವೆ. ನಮ್ಮ ಗುರಿಗಳನ್ನು ಸಾಧಿಸಲು ಇವು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು.
ಜಗತ್ತು ಭಾರತವನ್ನು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ. ನಮ್ಮ ಉತ್ಪಾದನಾ ಕ್ಷೇತ್ರದ ಜಿಡಿಪಿ ಶೇಕಡಾ 15ರಷ್ಟಿದೆ. ದೇಶದಲ್ಲಿ ದೃಢವಾದ ಉತ್ಪಾದನಾ ನೆಲೆಯನ್ನು ನಿರ್ಮಿಸಲು ನಾವು ಕೆಲಸ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.