ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದ ವಿಚಾರವಾಗಿ ವಿವಿಧ ಪಕ್ಷಗಳ ನಡುವೆ ರಾಜಕೀಯ ಕೇಸರೆರಚಾಟ ಮುಂದುವರೆದಿದೆ. ಕಳೆದ ಕೆಲ ದಿನಗಳ ಹಿಂದೆ ದೊರೈಸಾಮಿ ನಗರದಲ್ಲಿರುವ ಪಡಿತರ ಅಂಗಡಿಯಲ್ಲಿ ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ಪ್ರಧಾನಿ ಅವರ ಭಾವಚಿತ್ರ ಅಳವಡಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಕೊಯಮತ್ತೂರಿನ ವೆಲ್ಲಲೂರು ಮುನ್ಸಿಪಾಲಿಟಿ ಕಚೇರಿಯಲ್ಲಿ ಅಳವಡಿಕೆ ಮಾಡಲಾಗಿದ್ದ ನಮೋ ಫೋಟೋವೊಂದನ್ನು ತೆಗೆದು ಹಾಕಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೆಲ್ಲಲೂರು ಪುರಸಭೆ ಎಐಎಡಿಎಂಕೆ ಪಾಲಾಗಿದೆ. ಇಲ್ಲಿ ಎಐಎಡಿಎಂಕೆ ಪಕ್ಷದ ಮರುದಾಸಲಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇಂದು ಕಚೇರಿಗೆ ಆಗಮಿಸಿರುವ ಡಿಎಂಕೆ ಸದಸ್ಯನೋರ್ವ ಅಲ್ಲಿ ಅಳವಡಿಕೆ ಮಾಡಲಾಗಿದ್ದ ಪ್ರಧಾನಿ ಮೋದಿ ಫೋಟೋ ತೆಗೆದು ಹಾಕಿದ್ದಾರೆ.
ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಹಾಕಿಲ್ಲ. ಆದರೆ, ಇದೀಗ ನಗರಸಭೆಯಲ್ಲಿ ಅವರ ಭಾವಚಿತ್ರ ಇಡುವುದು ಹೇಗೆ? ಎಂದು ಸದಸ್ಯರು ಪ್ರಶ್ನೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಡಿಎಂಕೆ ಸದಸ್ಯನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಪಡಿತರ ಅಂಗಡಿಯಲ್ಲಿ ಕರುಣಾನಿಧಿ, ಸ್ಟಾಲಿನ್ ಫೋಟೋ: ಮೋದಿ ಭಾವಚಿತ್ರ ಹಾಕಿದ ಅಣ್ಣಾಮಲೈ!
ತಮಿಳುನಾಡಿನ ಕೊಯಮತ್ತೂರಿನ ದೊರೈಸಾಮಿ ನಗರದಲ್ಲಿರುವ ಪಡಿತರ ಅಂಗಡಿಯಲ್ಲಿ ಕೇವಲ ಕರುಣಾನಿಧಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಫೋಟೋ ಹಾಕಲಾಗಿತ್ತು. ಇದನ್ನು ಕಂಡು ಅಂಗಡಿಯೊಳಗೆ ತೆರಳಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಕೆ ಮಾಡಿ, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ(PMGKAY) ಅಡಿಯಲ್ಲಿ ಪಡಿತರ ನೀಡುತ್ತಿರುವ ಬಗ್ಗೆ ಅಲ್ಲಿನ ಜನರಿಗೆ ಮಾಹಿತಿ ತಿಳಿ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.