ನವದೆಹಲಿ: ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಎರಡನೇ ಹಂತ ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ಮೆಟ್ರೋ ಯೋಜನೆಗಳು ಗುಜರಾತ್‌ನ ಅಹಮದಾಬಾದ್ ಮತ್ತು ಸೂರತ್ ನಗರಗಳಿಗೆ ಪರಿಸರ ಸ್ನೇಹಿ ಮತ್ತು ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿವೆ. ಭೂಮಿ ಪೂಜೆ ಸಮಾರಂಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.
ಭೂಮಿ ಪೂಜೆ ಬಳಿಕ ಮಾತನಾಡಿದ ಪಿಎಂ ಮೋದಿ, ಅಹಮದಾಬಾದ್ ಮತ್ತು ಸೂರತ್ ಇಂದು ಬಹಳ ಮುಖ್ಯವಾದ ಉಡುಗೊರೆಗಳನ್ನು ಸ್ವೀಕರಿಸುತ್ತಿವೆ. ದೇಶದ ಎರಡು ಪ್ರಮುಖ ವ್ಯಾಪಾರ ಕೇಂದ್ರಗಳಾದ ಈ ನಗರಗಳನ್ನು ಮೆಟ್ರೋ ಸಂಪರ್ಕವು ಮತ್ತಷ್ಟು ಬಲಪಡಿಸುತ್ತದೆ. ನಾವು ನಗರಗಳ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ ಹಿಂದಿನ ಸರ್ಕಾರಗಳಿಗೆ ಮೆಟ್ರೋ ನಿರ್ಮಾಣದಲ್ಲಿ ಆಧುನಿಕ ವಿಧಾನಗಳ ಬಗ್ಗೆ ಅರಿವಿರಲಿಲ್ಲ ಎಂದು ಮೋದಿ ಕಾಂಗ್ರೆಸ್ಗೆ ಟಾಂಗ್ ನೀಡಿದರು.
ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ನಮ್ಮ ಸರ್ಕಾರವು ದೇಶಾದ್ಯಂತ ಮೆಟ್ರೋ ರೈಲು ಜಾಲದ ವಿಸ್ತರಣೆ ಕೆಲಸವನ್ನು ಮಾಡಿದೆ. 2014 ಕ್ಕಿಂತ ಮೊದಲು, 10-12 ವರ್ಷಗಳಲ್ಲಿ ಕೇವಲ 225 ಕಿ.ಮೀ ಉದ್ದದ ಮೆಟ್ರೋ ಮಾರ್ಗವು ಕಾರ್ಯರೂಪಕ್ಕೆ ಬಂದಿತ್ತು. ಹಿಂದಿನ ಸರ್ಕಾರಗಳಿಗೆ ಆಧುನಿಕತೆಯ ಅರಿವು ಇರಲಿಲ್ಲ ಎಂದು ಪ್ರಧಾನಿ ಅವರು ಕಾಂಗ್ರೆಸ್ ಪಕ್ಷದ ಕಾಲೆಳೆದರು. ನಮ್ಮ ಸರ್ಕಾರ ಬಂದ ಬಳಿಕ ಕಳೆದ 6 ವರ್ಷಗಳಲ್ಲಿ, 450 ಕಿ.ಮೀ. ಉದ್ದದ ಮೆಟ್ರೊ ನೆಟ್‌ವರ್ಕ್ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರದ 27 ನಗರಗಳಲ್ಲಿ 1,000 ಕಿಲೋ ಮೀಟರ್ ಮೆಟ್ರೊ ಮಾರ್ಗ ಕಾಮಗಾರಿಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ವಿಚಾರ; ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲಿರುವ ಮಥುರಾ ಕೋರ್ಟ್
ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ -2 ರಲ್ಲಿ 28.25 ಕಿ.ಮೀ ಉದ್ದದ ಎರಡು ಕಾರಿಡಾರ್‌ಗಳಿವೆ. ಮೊಟೆರಾ ಕ್ರೀಡಾಂಗಣದಿಂದ ಮಹಾತ್ಮ ಮಂದಿರವರೆಗೆ 22.8 ಕಿ.ಮೀ ಉದ್ದದ ಹಾಗೂ ಜಿಎನ್‌ಎಲ್‌ಯುನಿಂದ ಜಿಐಎಫ್ಟಿ ಸಿಟಿವರೆಗೆ 5.4 ಕಿ.ಮೀ ಉದ್ದದ ಕಾರಿಡಾರ್ ಇರಲಿದ್ದು, 5,384 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ.
ಸೂರತ್ ಮೆಟ್ರೋ ರೈಲು ಯೋಜನೆ 40.35 ಕಿ.ಮೀ ಉದ್ದವಿದ್ದು ಮತ್ತು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಸರ್ತಾನಾದಿಂದ ಡ್ರೀಮ್ ಸಿಟಿಯವರೆಗೆ 21.61 ಕಿ.ಮೀ ಉದ್ದದ ಕಾರಿಡಾರ್ ಹಾಗೂ ಭೆಸಾನ್ನಿಂದ ಸರೋಲಿ ವರೆಗೆ 18.74 ಕಿ.ಮೀ ಉದ್ದದ ಕಾರಿಡಾರ್ ಅಂದಾಜು 12,020 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ.