ಸಾಗರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕವಿ, ಸಮಾಜ ಸುಧಾರಕ ಸಂತ ರವಿದಾಸ್ ಮಂದಿರ ಮತ್ತು ಸ್ಮಾರಕಕ್ಕೆ ಶನಿವಾರ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಇಂದು ಸಂತ ರವಿದಾಸ್ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದೇನೆ. ಮುಂದಿನ ಒಂದೂವರೆ ವರ್ಷದಲ್ಲಿ ದೇಗುಲ ಪೂರ್ಣಗೊಳ್ಳಲಿದೆ. ದೇವಾಲಯದ ಲೋಕಾರ್ಪಣೆಗೂ ನಾನು ಖಂಡಿತವಾಗಿಯೂ ಬರುತ್ತೇನೆ. ಇದನ್ನು ಸಂತ ರವಿದಾಸ್ ಆಶೀರ್ವಾದದಿಂದ ಅತಿ ವಿಶ್ವಾಸದಿಂದ ಹೇಳುತ್ತಿದ್ದೇನೆ'' ಎಂದು ತಿಳಿಸಿದರು.
ಸಾಗರ್ ಜಿಲ್ಲೆಯ ಧಾನ ಗ್ರಾಮದಲ್ಲಿ 11.25 ಎಕರೆ ವಿಸ್ತೀರ್ಣದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕವಿ ಸಂತ ರವಿದಾಸ್ ಮಂದಿರ ಹಾಗೂ ಸ್ಮಾರಕ ನಿರ್ಮಾಣವಾಗಲಿದೆ. ಇದು ಮ್ಯೂಸಿಯಂ, ಆರ್ಟ್ ಗ್ಯಾಲರಿ ಮತ್ತು ಭಕ್ತರಿಗೆ ವಸತಿ ಸೌಲಭ್ಯಗಳ ಜೊತೆಗೆ ಇತರ ಸೌಕರ್ಯಗಳನ್ನು ಹೊಂದಿದೆ. ಇದಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಸಂತ ರವಿದಾಸ್ ಮೂರ್ತಿಗೆ ನಮಿಸಿದರು. ಅಲ್ಲದೇ, ದೇವಾಲಯ ಹಾಗೂ ಸ್ಮಾರಕದ ಮಾದರಿಯನ್ನು ಅವರು ವೀಕ್ಷಿಸಿದರು. ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿವಿಧ ರಸ್ತೆ ಯೋಜನೆಗಳಿಗೆ ಅಡಿಪಾಯ ಹಾಕುವುದರ ಜೊತೆಗೆ ಬಿನಾ-ಕೋಟಾ ರೈಲು ಮಾರ್ಗದ ಡಬ್ಲಿಂಗ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ''ದೇಶದ ಸಂಸ್ಕೃತಿಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಸಂತ ರವಿದಾಸ್ ದೇವಾಲಯ ಮತ್ತು ಸ್ಮಾರಕಕ್ಕೆ ಇಂದು ಅಡಿಪಾಯವನ್ನು ಹಾಕಲಾಗಿದೆ. ನಾನು ಕಾಶಿ ಕ್ಷೇತ್ರದ ಸಂಸದನಾಗಿ ನನಗೆ ಇದು ದುಪ್ಪಟ್ಟು ಸಂತೋಷವನ್ನುಂಟು ಮಾಡಿದೆ. ಏಕೆಂದರೆ ಕಾಶಿಯಲ್ಲೂ ರವಿದಾಸ್ ಅವರ ಜನ್ಮಸ್ಥಳಕ್ಕೆ ಹೋಗಿ ನಮಿಸುತ್ತೇನೆ'' ಎಂದು ಹೇಳಿದರು. ''ಮೊಘಲರು ಆಳ್ವಿಕೆ ನಡೆಸುತ್ತಿದ್ದ ಇಂತಹ ಕಾಲಘಟ್ಟದಲ್ಲಿ ಸಂತ ರವಿದಾಸರು ಜನಿಸಿದ್ದರು. ಮೊಘಲರ ದೌರ್ಜನ್ಯದಿಂದ ಜನರನ್ನು ರಕ್ಷಿಸಲು ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೇ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ಅವರು ಪ್ರೇರಣೆಯಾಗಿದ್ದರು'' ಎಂದು ಪ್ರಧಾನಿ ತಿಳಿಸಿದರು.
''ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ನಮ್ಮ ಸರ್ಕಾರದಿಂದ ಸೂಕ್ತವಾದ ಗೌರವ ಸಿಗುತ್ತಿದೆ. ಹಿಂದಿನ ಸರ್ಕಾರಗಳು ಈ ವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಚುನಾವಣೆಯ ಸಮಯದಲ್ಲಿ ಮಾತ್ರ ಶೋಷಿತ ಜನರನ್ನು ನೆನಪಿಸಿಕೊಳ್ಳುತ್ತಾರೆ'' ಎಂದು ಕಿಡಿಕಾರಿದ ಅವರು, ''ಹಿಂದಿನ ಸರ್ಕಾರಗಳು ಬಡವರಿಗೆ ಕುಡಿಯಲು ನೀರು ನೀಡುವಲ್ಲೂ ವಿಫಲವಾಗಿದ್ದವು. ಆದರೆ, ಈಗ ದಲಿತ ಬೀದಿಗಳು, ಹಿಂದುಳಿದ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಿಗೆ ನಮ್ಮ ಸರ್ಕಾರದ ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪ್ ಲೈನ್ ನೀರು ಪೂರೈಕೆಯಾಗುತ್ತಿದೆ'' ಎಂದು ಹೇಳಿದರು.
ಕೋವಿಡ್ ಅವಧಿಯನ್ನು ನೆನಪಿಸಿಕೊಂಡ ಪ್ರಧಾನಿ, ''ಕೊರೊನಾ ವೈರಸ್ನ ಬಿಕ್ಕಟ್ಟಿನಲ್ಲಿ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ನಿರ್ಧರಿಸಿದ್ದೇನೆ. ಹೀಗಾಗಿ ಕೊರೊನಾ ಅವಧಿ ಅವಧಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆ ಮಾಡಲಾಯಿತು. ಈ ಯೋಜನೆಯು ಇಡೀ ವಿಶ್ವವೇ ಶ್ಲಾಘಿಸುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಭಾರತವು ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಾದ ನೀತಿ ಹೊಂದಿದೆ: ಪ್ರಧಾನಿ ಮೋದಿ