ವಾರಣಾಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆಗಳಲ್ಲಿ ಒಂದಾದ ವಾರಣಾಸಿಯ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲು ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದು, ಗಂಗಾ ನದಿಯಲ್ಲಿ ಮಿಂದೆದ್ದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಪಿಎಂ ಮೋದಿ ಇಂದಿನಿಂದ ಎರಡು ದಿನಗಳ ದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಗಂಗಾ ನದಿ ಹಾಗೂ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಇಂದು ಉದ್ಘಾಟನೆ ಮಾಡಲಿದ್ದಾರೆ. ಎರಡು ದಿನಗಳ ಕಾಲ 'ದಿವ್ಯ ಕಾಶಿ ಭವ್ಯ ಕಾಶಿ' ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ.
ಇಂದು ಬೆಳಗ್ಗೆ 10.30ಕ್ಕೆ ವಾರಣಾಸಿಗೆ ಬಂದಿಳಿದ ಅವರು ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರತಿ ಮಾಡಿದರು. ಬಳಿಕ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ್ದು, ಕಾಶಿ ವಿಶ್ವನಾಥ ದೇವಾಲಯದಲ್ಲಿ ಭಗವಾನ್ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ 12 ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ.