ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ಮತ್ತು ವರ್ಷದ ಕೊನೆಯ ಮನ್ ಕಿ ಬಾತ್ ಆವೃತ್ತಿಯಲ್ಲಿ ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿದರು. 75 ವರ್ಷಗಳ ಅಮೃತ ಮಹೋತ್ಸವವು ಅದ್ಭುತವಾಗಿದೆ. ದೇಶಕ್ಕೆ ಅಮೃತಗಳಿಗೆ ಆರಂಭವಾಗಿದೆ. 220 ಕೋಟಿ ಕೊರೊನಾ ಲಸಿಕೆ ಡೋಸ್, 400 ಬಿಲಿಯನ್ ಡಾಲರ್ ವಿವಿಧ ರಫ್ತು ನಡೆಸಿ ವಿಶ್ವದಲ್ಲಿಯೇ ಭಾರತ ಐದನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು.
ಆತ್ಮನಿರ್ಭರದ ಭಾಗವಾಗಿ ನಿರ್ಮಿಸಲಾದ ಸ್ವದೇಶಿ ಐಎನ್ಎಸ್ ವಿಕ್ರಾಂತ್ಗೆ ಚಾಲನೆ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯ ಕಾರ್ಯಾರಂಭವು 75 ವರ್ಷಗಳ ಸ್ವಾತಂತ್ರ್ಯದ 'ಅಮೃತಕಾಲ'ವಾಗಿದೆ. ಇದು ದೇಶದ ಆತ್ಮವಿಶ್ವಾಸ ಮತ್ತು ಪರಾಕ್ರಮವನ್ನು ಸೂಚಿಸುತ್ತದೆ. ಈ ಸ್ವದೇಶಿ ನೌಕೆ ತಯಾರಿ ದೇಶದ ತಾಂತ್ರಿಕತೆ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಪುರಾವೆಯಾಗಿದೆ ಎಂದು ಹೊಗಳಿದರು.
ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಐಎನ್ಎಸ್ ವಿಕ್ರಾಂತ್ ಕಳೆದ ತಿಂಗಳು ಸೇನೆಗೆ ಸೇರ್ಪಡೆಯಾಯಿತು. ವಿಕ್ರಾಂತ್ ನಿರ್ಮಾಣದೊಂದಿಗೆ ದೇಶ ದೇಶೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯದ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಯಾಯಿತು ಎಂದರು.
ಜಿ20 ಅಧ್ಯಕ್ಷತೆ ಪ್ರಸ್ತಾಪ: 96ನೇ ಸಂಚಿಕೆಯ ಮನದ ಮಾತಿನಲ್ಲಿ ಮೋದಿ ಅವರು, ಈ ವರ್ಷ ದೇಶ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವುದನ್ನು ಪ್ರಸ್ತಾಪಿಸಿದರು. ಜಿ20 ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿನ ಪ್ರಧಾನ ವೇದಿಕೆಯಾಗಿದೆ. ವಿಶ್ವಾದ್ಯಂತ 75 ಪ್ರತಿಶತಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ವ್ಯಾಪಾರ ನಡೆಸುವ ಗುಂಪಾಗಿದೆ. ಇದರ ನೇತೃತ್ವ ಈಗ ದೇಶಕ್ಕೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ: ವಿಶ್ವದ ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಅಬ್ಬರಿಸುತ್ತಿದೆ. ದೇಶವಾಸಿಗಳು ಈ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿದ ಪ್ರಧಾನಿ, ಜಗತ್ತಿನ ವಿವಿಧೆಡೆ ಕೊರೊನಾ ಸಾಂಕ್ರಾಮಿಕ ಹೆಚ್ಚಾಗಿದ್ದನ್ನು ನಾವು ಗಮನಿಸಬಹುದು. ಎಚ್ಚರಿಕೆಯಿಂದಿರುವ ಮೂಲಕ ಮಾಸ್ಕ್ ಧಾರಣೆ, ಕೈಗಳನ್ನು ಸ್ಯಾನಿಟೈಸರ್ ಮೂಲಕ ತೊಳೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮೋದಿ ವರ್ಷದ ಕೊನೆಯ 'ಮನ್ ಕಿ ಬಾತ್': ಬೆಳಗ್ಗೆ 11ರಿಂದ ಕೇಳಿ..