ನವದೆಹಲಿ: ಗುಜರಾತ್ನ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
201 ಎಕರೆ ಪ್ರದೇಶದಲ್ಲಿ, 1,195 ಕೋಟಿ ರೂ.ಗಳ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು, 2022ರ ಮಧ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅತ್ಯಾಧುನಿಕ 750 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆ ಇದಾಗಿದ್ದು, 30 ಹಾಸಿಗೆಗಳ ಆಯುಷ್ ಬ್ಲಾಕ್ ಕೂಡ ಇರುತ್ತದೆ. 125 ಎಂಬಿಬಿಎಸ್ ಹಾಗೂ 60 ನರ್ಸಿಂಗ್ ಸೀಟುಗಳು ಇರಲಿವೆ ಎಂಬ ಮಾಹಿತಿಯಿದೆ.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ದಿನ ಭಾರತದ ಲಕ್ಷಾಂತರ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಗಳನ್ನ ನೆನೆಪಿಸಿಕೊಳ್ಳುವ ವರ್ಷದ ಕೊನೆಯ ದಿನವಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ನೀಡಿದವರಿಗೆ ನಮನ ಸಲ್ಲಿಸುತ್ತೇನೆ ಎಂದರು.
'ಆರೋಗ್ಯವೇ ಸಂಪತ್ತು' ಎಂಬುದನ್ನು ಕಲಿಸಿದ ವರ್ಷ
ದೇಶದಲ್ಲೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಬರುವ ಈ ವರ್ಷದಲ್ಲಿ ನಾವು ಅತಿಹೆಚ್ಚು ಜನರಿಗೆ ಲಸಿಕೆ ವಿತರಿಸಲು ತಯಾರಿ ನಡೆಸುತ್ತಿದ್ದೇವೆ. ಭಾರತವು ಜಾಗತಿಕ ಆರೋಗ್ಯ ಕೇಂದ್ರವಾಗಿ ಹೊರಹೊಮ್ಮಿದೆ. 2021 ರಲ್ಲಿ ಆರೋಗ್ಯದ ರಕ್ಷಣೆಯಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸಬೇಕಾಗಿದೆ. 2020, ಸವಾಲುಗಳಿಂದ ತುಂಬಿದ ವರ್ಷವಾಗಿದ್ದು, 'ಆರೋಗ್ಯವೇ ಸಂಪತ್ತು' ಎಂಬುದನ್ನ ನಮಗೆ ಚೆನ್ನಾಗಿ ಕಲಿಸಿದೆ ಎಂದು ಮೋದಿ ಹೇಳಿದರು.